ಯಲ್ಲಾಪುರ: ಬರಗಾಲದ ಹಿನ್ನೆಲೆಯಲ್ಲಿ ದನಕರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿರುವುದರಿಂದ, ರೈತರಿಗೆ ಮೇವಿನ ಬೀಜದ ಬದಲು ಸಿದ್ಧ ಮೇವು ಪೂರೈಸಬೇಕು ಎಂದು ರೈತರು ಶುಕ್ರವಾರ ಬೆಳಿಗ್ಗೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದು, ಪಶುಸಂಗೋಪನಾ ಇಲಾಖೆಯ ವತಿಯಿಂದ ಮೇವಿನ ಬೀಜ ವಿತರಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ದನಗಳನ್ನು ಸಾಕುವುದು ಮತ್ತು ಅವುಗಳಿಗೆ ಅಗತ್ಯವಾದ ಮೇವನ್ನು ಒದಗಿಸುವುದು ರೈತರಿಗೆ ಕಷ್ಟಕರವಾಗಿದೆ.
ಮೇವಿನ ಬೀಜ ವಿತರಿಸುವ ಬದಲು ಸಿದ್ಧ ಮೇವನ್ನು ಪೂರೈಸಿದರೆ ರೈತರಿಗೆ ತಕ್ಷಣದ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಹರಿಪ್ರಕಾಶ್ ಕೋಣೆಮನೆ, ಪ್ರಸಾದ ಹೆಗಡೆ, ಸುಬ್ಬಣ್ಣ ಉದ್ದಾಬೈಲು, ರಾಘವೇಂದ್ರ ಭಟ್ ಹಾಸಣಗಿ, ಕಿಸಾನ್ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಭಾಸ್ಕರ ಸಿದ್ದಿ, ರಘುಪತಿ ಸೇರಿದಂತೆ ರೈತರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.


