ಯಲ್ಲಾಪುರ: ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಶಿಸ್ತುಬದ್ಧ ಜೀವನಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಶ್ರೀ ಮಹಾಗಣಪತಿ ಕಲಾಬಳಗದ ಗೌರವಾಧ್ಯಕ್ಷ ನಾಗರಾಜ ಕವಡಿಕೆರೆ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಉಪಳೇಶ್ವರದ ಗ್ರಾ.ಪಂ ಸಭಾಭವನದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಗಾಭ್ಯಾಸವು ದೈಹಿಕ ಆರೋಗ್ಯದ ಜೊತೆಗೆ ಆತ್ಮವಿಶ್ವಾಸ ಮತ್ತು ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ಬೆಳೆಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಇತರರನ್ನು ಅನುಕರಿಸುವ ಬದಲು ಪ್ರತಿಯೊಬ್ಬರೂ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅದರತ್ತ ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿದ ರಾಮಕೃಷ್ಣ ಕವಡಿಕೆರೆ, ಯೋಗವು ಭಾರತ ದೇಶವು ವಿಶ್ವಕ್ಕೆ ನೀಡಿರುವ ಅಪೂರ್ವ ಕೊಡುಗೆಯಾಗಿದ್ದು, ಪ್ರತಿಯೊಂದು ಮನೆಯಲ್ಲೂ ಯೋಗಾಭ್ಯಾಸದ ಸಂಸ್ಕೃತಿ ಬೆಳೆಯಬೇಕು ಎಂದರು.
ಇಂದು ಯೋಗಕ್ಕೆ ಜಾಗತಿಕ ಮಾನ್ಯತೆ ದೊರೆತಿದೆ. ಉಪಳೇಶ್ವರ ಭಾಗದಲ್ಲಿಯೂ ವಾರಕ್ಕೊಮ್ಮೆಯಾದರೂ ಸಾಮೂಹಿಕ ಯೋಗಾಭ್ಯಾಸ ನಡೆಸುವ ಪರಿಪಾಠ ಬೆಳೆಯಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಯೋಗಾಸಕ್ತರು ಭಾಗವಹಿಸಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ಸುಬ್ಬಣ್ಣ ಉದ್ದಾಬೈಲ ಸ್ವಾಗತಿಸಿದರು. ಚಂದ್ರಶೇಖರ ಹುತ್ಕಂಡ ಕಾರ್ಯಕ್ರಮ ನಿರೂಪಿಸಿದರು. ಗೋಪಾಲಕೃಷ್ಣ ಬಾಳೆಗದ್ದೆ ವಂದಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದವಿಶ್ವನಾಥ ಭಟ್ಟ ಉದ್ದಾಬೈಲ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಪ್ಪು ಆಚಾರಿ, ನಾಗರಾಜ ಭೋವಿವಡ್ಡರ್, ನರಸಿಂಹ ಸಿದ್ದಿ, ಜನಪ್ರಿಯ ಟ್ರಸ್ಟ್ನ ಮಹೇಶ ಭಟ್ ಕಂಚನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ಥಳೀಯ ಕಲಾಬಳಗದ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.