ಶಿರಸಿ: ಗ್ರಾಮೀಣ ಅತಿಕ್ರಮಣ ಜಾಗದಲ್ಲಿರುವ ಆಸ್ತಿಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡುವಂತೆ ಕೇಂದ್ರ ಸರ್ಕಾರ ಯಾವ ಆದೇಶ ನೀಡಿದೆ ಎಂಬುದನ್ನು ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಬಹಿರಂಗಪಡಿಸಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡಗೋಡ ಆಗ್ರಹಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಅತಿಕ್ರಮಣ ಜಾಗದಲ್ಲಿರುವ ಆಸ್ತಿಗಳನ್ನು ತೆರಿಗೆ ಪಟ್ಟಿಯಿಂದ ಕೈಬಿಡಲು ಆದೇಶಿಸಿರುವುದನ್ನು ಸಮರ್ಥಿಸಿಕೊಳ್ಳಲಾಗದೆ, ಈ ನಿರ್ಧಾರಕ್ಕೆ ಕೇಂದ್ರ ಸರ್ಕಾರದ ನಿರ್ದೇಶನವೇ ಕಾರಣ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳುತ್ತಿದ್ದರೆ, ಈ ಕುರಿತು ಕೇಂದ್ರದಿಂದ ಬಂದಿರುವ ಸುತ್ತೋಲೆಯನ್ನು ಶಾಸಕರು ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಹಾಗೂ ಮಾಡಿರುವ ಕಾನೂನು ತಿದ್ದುಪಡಿಯನ್ನು ಶಾಸಕರು ಸರಿಯಾಗಿ ಓದಿ ಅರ್ಥಮಾಡಿಕೊಳ್ಳಬೇಕು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ವಿಷಯವನ್ನು ತಿಳಿದುಕೊಳ್ಳಬೇಕು ಎಂದು ಸದಾನಂದ ಭಟ್ ಹೇಳಿದ್ದಾರೆ.
ಅತಿಕ್ರಮಣದಾರರನ್ನು ಆಸ್ತಿ ತೆರಿಗೆಯಿಂದ ಕೈಬಿಡುವುದನ್ನು ವಿರೋಧಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನಜಾಗೃತಿ ಮೂಡಿಸುತ್ತಿರುವುದನ್ನು ಸಹಿಸಲಾಗದೆ ಶಾಸಕ ಭೀಮಣ್ಣ ನಾಯ್ಕ ಅವರು ಎಂದಿನಂತೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಹಾಗೂ ಅವರ ಕುಟುಂಬವನ್ನು ಹೊಗಳುವ ಭರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೈತಿಕತೆಯ ಕುರಿತು ಮಾತನಾಡುವ ಶಾಸಕರು, ಜನಪರ ವಿಷಯಗಳಲ್ಲಿ ಕಾಂಗ್ರೆಸ್ ನಾಯಕರು ಅನುಸರಿಸುತ್ತಿರುವ ದ್ವಿಮುಖ ನೀತಿಯ ನೈತಿಕತೆಯ ಬಗ್ಗೆಯೂ ಮಾತನಾಡಲಿ ಎಂದು ಸದಾನಂದ ಭಟ್ ಟೀಕಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಡವರ ನೋವು ಗೊತ್ತಾಗುತ್ತಿಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಆರೋಪಿಸುತ್ತಿರುವುದಾದರೆ, ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕಾನೂನುಬದ್ಧವಾಗಿ ಅತಿಕ್ರಮಣದಾರರಿಗೆ ಪಟ್ಟಾ ಕೊಡಿಸಲು ಅವರು ಮುಂದಾಗಲಿ. ಈ ವಿಚಾರದಲ್ಲಿ ಶಾಸಕರು ಎಷ್ಟು ಸ್ಪಂದಿಸಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ಈ ಆದೇಶವನ್ನು ಯಾವಾಗ ಹಿಂಪಡೆಯಲಾಗುತ್ತದೆ ಎಂಬುದನ್ನೂ ಶಾಸಕರು ಸ್ಪಷ್ಟಪಡಿಸಬೇಕು. ಬಿಜೆಪಿ ಜನಪ್ರತಿನಿಧಿಗಳು ಮತ್ತು ಸರ್ಕಾರ ಅತಿಕ್ರಮಣದಾರರ ಹಿತಕ್ಕಾಗಿ ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಿ ಮಾತನಾಡಬೇಕು ಎಂದು ಅವರು ಹೇಳಿದ್ದಾರೆ.
ಶಾಸಕರಾದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅತಿಕ್ರಮಣದಾರರ ಹಿತ ರಕ್ಷಣೆಗೆ ಏನು ಮಾಡಲಾಗಿದೆ ಎಂಬುದು ಜನರಿಗೆ ತಿಳಿದಿದೆ. ಜನವಿರೋಧಿ ಎಂದು ಆರೋಪಿಸಲಾಗುತ್ತಿರುವ ಸುತ್ತೋಲೆಯನ್ನು ಹಿಂಪಡೆಯುವ ಬದಲು ಅದನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡುತ್ತಿರುವ ಶಾಸಕರು, ಅತಿಕ್ರಮಣದಾರರು ಬಡವರಾಗಿರುವುದರಿಂದ ತೆರಿಗೆ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸದಾನಂದ ಭಟ್ ಆರೋಪಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಅತಿಕ್ರಮಣದಾರರಿಗೆ ಸರ್ಕಾರಿ ಭೂಮಿಯಲ್ಲಿ 50 ಸಾವಿರ ನಿವೇಶನಗಳನ್ನು ಎಲ್ಲಾ ಸೌಲಭ್ಯಗಳೊಂದಿಗೆ ಒದಗಿಸುವುದಾಗಿ ಕಾಂಗ್ರೆಸ್ ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ, ಈಗಿರುವ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ಸಿದ್ಧತೆ ನಡೆಸಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಮೂಡುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶವನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದಿಂದ ಜನರಲ್ಲಿ ಸರ್ಕಾರದ ವಿರುದ್ಧ ಉಂಟಾಗಿರುವ ಆಕ್ರೋಶಕ್ಕೆ ಉತ್ತರಿಸಲಾಗದೆ ಶಾಸಕ ಭೀಮಣ್ಣ ನಾಯ್ಕ ರಾಜಕೀಯ ಆರೋಪಗಳ ಮೂಲಕ ಮಾತನಾಡುತ್ತಿದ್ದಾರೆ. ಇದರಿಂದ ಸುತ್ತೋಲೆಯ ಹಿಂದಿನ ನೈಜ ಉದ್ದೇಶದ ಬಗ್ಗೆಯೇ ಅನುಮಾನ ಮೂಡುತ್ತಿದೆ ಎಂದು ಸದಾನಂದ ಭಟ್ ಹೇಳಿದ್ದಾರೆ.
ಶಾಸಕರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಗ್ಗೆ ಮಾತನಾಡುವ ಬದಲು, ನಿಜವಾಗಿಯೂ ಜನಪರ ಕಾಳಜಿ ಹೊಂದಿದ್ದರೆ ಸರ್ಕಾರದ ಆದೇಶವನ್ನು ಎಷ್ಟು ದಿನಗಳೊಳಗೆ ಹಿಂಪಡೆಯಲಾಗುತ್ತದೆ ಎಂಬ ಸ್ಪಷ್ಟ ಮಾಹಿತಿಯನ್ನು ನೀಡಲಿ. ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಸಂಸದರ ಮೇಲೆ ಜವಾಬ್ದಾರಿ ಹೊರಿಸುವ ಹೇಳಿಕೆಗಳನ್ನು ನಿಲ್ಲಿಸಿ, ಅತಿಕ್ರಮಣದಾರರ ಪರವಾಗಿ ನಿರ್ದಿಷ್ಟವಾಗಿ ಏನು ಮಾಡುತ್ತೇವೆ ಎಂಬುದನ್ನು ಶಾಸಕರು ತಿಳಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಬಿಜೆಪಿ ಸಂಸದರ ನೇತೃತ್ವದಲ್ಲಿ ಈ ಆದೇಶ ಹಿಂಪಡೆಯುವವರೆಗೂ ಜನಪರ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡಗೋಡ ತಿಳಿಸಿದ್ದಾರೆ.


