Monday, September 7, 2026
Join WhatsApp Group
HomeLocal Newsಅರಣ್ಯ ಇಲಾಖೆಯ ಆದೇಶಕ್ಕೆ ಆಕ್ಷೇಪ

ಅರಣ್ಯ ಇಲಾಖೆಯ ಆದೇಶಕ್ಕೆ ಆಕ್ಷೇಪ

ಜಿಲ್ಲಾಧಿಕಾರಿ ಮಧ್ಯಪ್ರವೇಶಕ್ಕೆ ರವೀಂದ್ರ ನಾಯ್ಕ ಆಗ್ರಹ

ಸಿದ್ದಾಪುರ: ಅರಣ್ಯ ಇಲಾಖೆಯ ತಪ್ಪಾದ ನಿಲುವು ಮತ್ತು ಒಕ್ಕಲೆಬ್ಬಿಸುವ ಆದೇಶದಿಂದ ನಿವೃತ್ತ ಸೈನಿಕನ ಕುಟುಂಬ ಆತಂಕಕ್ಕೆ ಒಳಗಾಗಿದ್ದು, ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಹೊಸೂರು ಗ್ರಾಮದ ನಿವೃತ್ತ ಸೈನಿಕ ಕೃಷ್ಣ ದ್ಯಾವ ನಾಯ್ಕ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಭೂಮಿಗೆ ಅರ್ಜಿ ಸಲ್ಲಿಸಿದ್ದು, ಸ್ಥಳ ಪರಿಶೀಲನಾ ಸಮಿತಿ ಹಾಗೂ ಜಿಪಿಎಸ್ ನಕ್ಷೆಯಲ್ಲಿ ಸರ್ವೆ ನಂ. 210 ಎಂದು ಗುರುತಿಸಲಾಗಿದೆ. ಆದರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೆನರಾ ವೃತ್ತದ ಮೇಲ್ಮನವಿ ಪ್ರಾಧಿಕಾರ ಹೊರಡಿಸಿರುವ ಆದೇಶದಲ್ಲಿ ಸರ್ವೆ ನಂ. 151 ಎಂದು ಉಲ್ಲೇಖಿಸಿ ಒಕ್ಕಲೆಬ್ಬಿಸಲು ಆದೇಶಿಸಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಅರಣ್ಯ ಇಲಾಖೆಯ ಜಿಪಿಎಸ್ ಸರ್ವೆ, ಕಂದಾಯ ಇಲಾಖೆಯ ದಿಶಾಂಕ ನಕ್ಷೆ ಹಾಗೂ ಆದೇಶದಲ್ಲಿರುವ ಸರ್ವೆ ಸಂಖ್ಯೆಗಳ ನಡುವೆ ವ್ಯತ್ಯಾಸವಿದ್ದು, ಅರ್ಜಿಯ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೇ ಒಕ್ಕಲೆಬ್ಬಿಸುವ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೋರಾಟಗಾರರು ದಿಶಾಂಕ ತಂತ್ರಜ್ಞಾನದ ಮೂಲಕ ಸ್ಥಳ ಪರಿಶೀಲನೆ ನಡೆಸಿದಾಗ, ಸಾಗುವಳಿ ಪ್ರದೇಶವು ಸರ್ವೆ ನಂ. 159 ವ್ಯಾಪ್ತಿಯಲ್ಲಿ ಕಂಡುಬಂದಿದೆ. ಕಂದಾಯ ದಾಖಲೆಗಳ ಪ್ರಕಾರ ಈ ಜಾಗವು ನಿಕ್ಕಿ ಜಲಪಾತದ ಹಿನ್ನೀರಿಗೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಈ ಗೊಂದಲವನ್ನು ಜಿಲ್ಲಾಧಿಕಾರಿಗಳು ತಕ್ಷಣ ನಿವಾರಿಸಬೇಕು. ಅಲ್ಲದೇ ಒಕ್ಕಲೆಬ್ಬಿಸುವ ಕಾರ್ಯಾಚರಣೆಗೆ ಪೊಲೀಸ್ ರಕ್ಷಣೆ ನೀಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ ಮಧ್ಯಪ್ರವೇಶಿಸದೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾದರೆ ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ರವೀಂದ್ರ ನಾಯ್ಕ ಎಚ್ಚರಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share