ಶಿರಸಿ: ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಅವರ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆರೋಪಿಸಿದರು.
ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯಿತಿ ಎದುರು ನಡೆದ ‘ನಮ್ಮ ಮನೆ, ನಮ್ಮ ಹಕ್ಕು’ ಜನಾಗ್ರಹ ಆಂದೋಲನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡು ಅರಣ್ಯ ಅತಿಕ್ರಮಣದಾರರ ಮನೆಗಳಿಂದ ತೆರಿಗೆ ಸಂಗ್ರಹಿಸದಂತೆ ಪಂಚಾಯಿತಿಗಳಿಗೆ ಆದೇಶ ಹೊರಡಿಸಿದೆ. ಇದರಿಂದ ರೈತರನ್ನು ಬೀದಿಗೆ ತಳ್ಳುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.
ಬ್ರಿಟಿಷರೂ ಇಷ್ಟೊಂದು ಕ್ರೂರಿಗಳಾಗಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಅವರಿಗಿಂತಲೂ ಕ್ರೂರವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.
ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಾಗಬೇಕಿದ್ದರೂ ಬಿಸಿಲು ಅಬ್ಬರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಶಿರಸಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕಿತ್ತು. ಆದರೆ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ಅವರ ಭೂಮಿಯನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ನಮ್ಮ ರೈತರಿಗೆ ಅನ್ಯಾಯವಾದರೆ, ತೊಂದರೆಯಾದರೆ ರಾಜೀನಾಮೆ ನೀಡುತ್ತೇನೆ ಎಂದು ಸ್ಥಳೀಯ ಶಾಸಕರಿಗೆ ತಾಕತ್ ಇದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ಶಿರಸಿಯಲ್ಲಿ ಮಾತನಾಡುವುದು, ಬೆಂಗಳೂರಿನಲ್ಲಿ ಮೌನ ತಾಳುವುದು ಇಂತಹ ದ್ವಂದ್ವ ನೀತಿ ಜನರಿಗೆ ಅರ್ಥವಾಗುತ್ತಿದೆ. ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಬಿಜೆಪಿ ಪ್ರಮುಖ ಆರ್.ಡಿ. ಹೆಗಡೆ ಮಾತನಾಡಿ, ಅರಣ್ಯ ಅತಿಕ್ರಮಣದಾರರ ಮನೆಗಳಿಂದ ತೆರಿಗೆ ಸಂಗ್ರಹಿಸದಂತೆ ಸರ್ಕಾರ ಪಂಚಾಯಿತಿಗಳಿಗೆ ಆದೇಶಿಸಿರುವುದು ರೈತ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ರೈತರು ಈಗಾಗಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸರ್ಕಾರದ ಈ ಆದೇಶದಿಂದ ಮತ್ತಷ್ಟು ತೊಂದರೆಯಾಗಲಿದೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಕೈಬಿಡಬೇಕು. ಜನರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಆದೇಶ ಹಿಂಪಡೆಯುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ 150 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸ್ವಲ್ಪವೂ ಕನಿಕರವಿಲ್ಲ. ಈ ವಿಚಾರದಲ್ಲಿ ಧ್ವನಿ ಎತ್ತಬೇಕಾದ ಸ್ಥಳೀಯ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸರ್ಕಾರ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು. ಆದೇಶ ಹಿಂಪಡೆಯದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳುವ ಸಾಮರ್ಥ್ಯ ಸ್ಥಳೀಯ ಶಾಸಕರಿಗಿಲ್ಲ. ಎಚ್.ಕೆ. ಪಾಟೀಲ್ ಅವರಿಗೆ ಇರುವ ಜನಪರ ಚಿಂತನೆಗಳು ಜಿಲ್ಲೆಯ ಕಾಂಗ್ರೆಸ್ ಶಾಸಕರಿಗಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಹ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯರಾಮ ಹೆಗಡೆ, ಪ್ರವೀಣ ಹೆಗಡೆ, ರಾಘವ ಹೆಗಡೆ, ಅನುಸೂಯ ಹೆಗಡೆ, ಕೃಷ್ಣ ಸಿದ್ದಿ, ನಾಗರಾಜ ಶೆಟ್ಟಿ, ದತ್ತಾತ್ರೇಯ ವೈದ್ಯ ಸೇರಿದಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಹಲವರು ಉಪಸ್ಥಿತರಿದ್ದರು. ಶೇಖರ್ ಹೆಗಡೆ ಸ್ವಾಗತಿಸಿದರು. ಕವಿತಾ ಭಟ್ ವಂದಿಸಿದರು.


