ಕೆನರಾ ನೆಕ್ಸ್ಟ್ ನ್ಯೂಸ್ ಡೆಸ್ಕ್
ಕಾರವಾರ: ಕೈಯಲ್ಲಿ ಒಂದು ಕೌಶಲ್ಯವಿದ್ದರೆ ಉದ್ಯೋಗ ಹುಡುಕುವ ಬದಲು ಸ್ವಯಂ ಉದ್ಯೋಗ ಆರಂಭಿಸಬಹುದು. ಅಂತಹ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸೆ.7ರಿಂದ 31 ದಿನಗಳ ಉಚಿತ ಸೆಲ್‌ಫೋನ್ ರಿಪೇರಿ ತರಬೇತಿ ಆಯೋಜಿಸಲಾಗಿದೆ.
ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ 18ರಿಂದ 49 ವರ್ಷದ ಕರ್ನಾಟಕದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ತರಬೇತಿಗೆ ಅರ್ಹರಾಗಿದ್ದಾರೆ. ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ, ಊಟ ಹಾಗೂ ವಸತಿ ಸಂಪೂರ್ಣ ಉಚಿತವಾಗಿರಲಿದೆ. ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು ಸ್ಥಳೀಯ ಭಾಷೆ ತಿಳಿದಿದ್ದು, ಕನ್ನಡ ಓದಲು ಹಾಗೂ ಬರೆಯಲು ಬಲ್ಲವರಾಗಿರಬೇಕು. ತರಬೇತಿ ಪೂರ್ಣಗೊಳಿಸಿದವರಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣಪತ್ರ ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಸೆ.7ರಂದು ಬೆಳಗ್ಗೆ 9.30ಕ್ಕೆ ಸೊಣ್ಣಹಳ್ಳಿಪುರದಲ್ಲಿರುವ ತರಬೇತಿ ಸಂಸ್ಥೆಗೆ ವಿದ್ಯಾರ್ಹತೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ನೇರವಾಗಿ ಹಾಜರಾಗಬಹುದು. ನೇರವಾಗಿ ಹಾಜರಾಗಲು ಸಾಧ್ಯವಾಗದವರು ಸೆ.7ರೊಳಗೆ 8970476050, 9591514154, 6363139123, 9686248369 ಅಥವಾ 9886935603 ಸಂಖ್ಯೆಗಳ ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.