ಕಾರವಾರ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇದ್ದರೂ ಹೆಸರು, ವಿಳಾಸ ಅಥವಾ ಇತರ ವಿವರಗಳಲ್ಲಿ ಬದಲಾವಣೆ ಬೇಕಿದೆಯೇ? ಹಾಗಿದ್ದರೆ ಮತದಾರರು ತಮ್ಮ ಮತಗಟ್ಟೆಗೆ ತೆರಳಿ ಪರಿಶೀಲಿಸಿಕೊಳ್ಳಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆಗಸ್ಟ್ 29, 30 ಹಾಗೂ ಸೆಪ್ಟೆಂಬರ್ 19, 20ರಂದು ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಆಂದೋಲನ ದಿನಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ಈ ವಿಶೇಷ ದಿನಗಳಲ್ಲಿ ಜಿಲ್ಲೆಯ ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿರುವ ಬಿಎಲ್ಒಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಬಿಎಲ್ಒಗಳು ಮತಗಟ್ಟೆಗಳಲ್ಲಿ ಲಭ್ಯವಿರಲಿದ್ದು, ಹೊಸದಾಗಿ ಹೆಸರು ಸೇರ್ಪಡೆ, ಹೆಸರು ಅಥವಾ ಇತರ ವಿವರಗಳ ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ವಿವಿಧ ಅಗತ್ಯ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ಮತದಾರರು ಕರಡು ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳಲು ಬಿಎಲ್ಒಗಳು ಸಹಕರಿಸಲಿದ್ದಾರೆ. ಹೀಗಾಗಿ ಮತದಾರರು ಈ ವಿಶೇಷ ಆಂದೋಲನದ ಅವಕಾಶವನ್ನು ಬಳಸಿಕೊಂಡು ತಮ್ಮ ಮತದಾನದ ಹಕ್ಕಿಗೆ ಸಂಬಂಧಿಸಿದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.