ಯಲ್ಲಾಪುರ: ಪಟ್ಟಣದ ಹೆಬ್ಬಾರ ನಗರದಲ್ಲಿ ನಿರ್ಮಿಸಲಾದ ಜಿ+2 ಮನೆಗಳ ಹಂಚಿಕೆ ಕುರಿತು ಪರಿಶೀಲನೆ ನಡೆಸಿ, ಅರ್ಹ ಫಲಾನುಭವಿಗಳಿಗೆ ಮನೆಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನೆ ಹಂಚಿಕೆಯಲ್ಲಿ ಅರ್ಹರಿಗೆ ಅನ್ಯಾಯವಾಗಿರುವ ಕುರಿತು ದೂರುಗಳು ಹಾಗೂ ಆಕ್ಷೇಪಗಳಿದ್ದು, ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಬೇಕು. ಅನರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಯಾಗಿರುವುದು ಕಂಡುಬಂದರೆ ನಿಯಮಾನುಸಾರ ಕ್ರಮ ಕೈಗೊಂಡು, ಅರ್ಹ ಬಡ ಕುಟುಂಬಗಳಿಗೆ ಮನೆ ದೊರೆಯುವಂತೆ ಮಾಡಬೇಕು ಎಂದು ಮನವಿಯ ಮೂಲಕ ವಿನಂತಿಸಿದರು.
ಮನೆ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಫಲಾನುಭವಿಗಳ ಅರ್ಹತೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಹಂಚಿಕೆ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದ್ದರೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಶವ ಚೌಗಲೆ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಸಾದ ಹೆಗಡೆ, ಉಮೇಶ ಭಾಗ್ವತ್, ರಾಘವೇಂದ್ರ ಭಟ್ಟ, ಗಣೇಶ ಪಾಟಣಕರ್, ಸೋಮೇಶ್ವರ ನಾಯ್ಕ, ನಟರಾಜ ಗೌಡರ್, ಪ್ರದೀಪ ಯಲ್ಲಾಪುರಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


