ಹಳಿಯಾಳ: ಜಾತ್ರೆಗೆ ತೆರಳಿ ಕುಟುಂಬದೊಂದಿಗೆ ಮನೆಗೆ ಮರಳುತ್ತಿದ್ದ ಮಹಿಳೆಯ ಕೊರಳಲ್ಲಿದ್ದ 30 ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹಳಿಯಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 4.50 ಲಕ್ಷ ರೂ ಮೌಲ್ಯದ ಬಂಗಾರದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂ ಮೌಲ್ಯದ ಪ್ಯಾಶನ್ ಪ್ರೊ ಮೋಟಾರ್ ಸೈಕಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
2026ರ ಫೆ.9ರಂದು ರಾತ್ರಿ 9ರ ಸುಮಾರಿಗೆ ಹಳಿಯಾಳದ ಮುರ್ಕವಾಡ ಜಾತ್ರಾ ಮಹೋತ್ಸವಕ್ಕೆ ಕುಟುಂಬದೊಂದಿಗೆ ತೆರಳಿದ್ದ ಮಹಿಳೆಯೊಬ್ಬರು ವಾಪಸ್ ಮನೆಗೆ ಬರುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಅವರ ಕೊರಳಲ್ಲಿದ್ದ 30 ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಗಾಗಿ ಹಳಿಯಾಳ ಪೊಲೀಸರು ವಿಶೇಷ ಪತ್ತೆ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವಿನ ಆಧಾರದ ಮೇಲೆ ಆ.8ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಕಾವಲವಾಡ ಹಾಗೂ ಹೊಸ ಹಡಗಲಿ ಗ್ರಾಮಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಹೊಸ ಹಡಗಲಿಯ ಶಶಿಧರ ಉಳವಪ್ಪ ಬಾರ್ಕಿ, ಹಳಿಯಾಳ ತಾಲೂಕಿನ ಕೆ.ಕೆ ಹಳ್ಳಿಯ ಕಿರಣ ಧರ್ಮರಾಜ್ ಗೋಡಿಮನಿ ಹಾಗೂ ಹಳಿಯಾಳ ಮಡ್ಡಿಯ ವಾಸಿಮ್ ಶಿರಾಜುದ್ದೀನ್ ಚವಾಣ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಮಹಿಳೆಯ ಕೊರಳಿನಿಂದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 4.50 ಲಕ್ಷ ರೂ ಮೌಲ್ಯದ 30 ಗ್ರಾಂ ಬಂಗಾರದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ₹50 ಸಾವಿರ ಮೌಲ್ಯದ ಪ್ಯಾಶನ್ ಪ್ರೊ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.
ಈ ಕಾರ್ಯಾಚರಣೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಹಳಿಯಾಳ ಪೊಲೀಸ್ ವೃತ್ತ ನಿರೀಕ್ಷಕ ಜಯಪಾಲ್ ಪಾಟೀಲ್ ನೇತೃತ್ವ ವಹಿಸಿದ್ದರು.
ಕಾರ್ಯಾಚರಣೆಯಲ್ಲಿ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಕೃಷ್ಣಗೌಡ ಅರಕೇರಿ ಮತ್ತು ಮಹೇಶ ಮಾಳಿ, ಸಿಬ್ಬಂದಿಗಳಾದ ಭೀಮಪ್ಪ ಕದರಮಂಡಲಗಿ, ಶ್ರೀಶೈಲ್ ಜಿ.ಎಂ., ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಬಾಲಿ, ನಿಂಗಪ್ಪ ಬಳ್ಳಾರಿ, ವಿನೋದ್, ಬಸವರಾಜ್ ಚವಡಿ, ಬಸವರಾಜ್ ತ್ಯಾಪಿ, ವಾಹನ ಚಾಲಕರಾದ ಗಂಗಾಧರ ಮತ್ತು ಉಮೇಶ ತೇಲಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಬಬನ ಕದಂ, ಉದಯ ಗುನಗಾ ಮತ್ತು ಮಹಾಲಿಂಗ ಸಾವಳಗಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ.