Monday, September 7, 2026
Join WhatsApp Group
HomeLocal Newsಯಲ್ಲಾಪುರ-ಅಂಕೋಲಾ ತಾಲೂಕುಗಳ ನಿದ್ದೆಗೆಡಿಸಿದ ರೈಲ್ವೆ

ಯಲ್ಲಾಪುರ-ಅಂಕೋಲಾ ತಾಲೂಕುಗಳ ನಿದ್ದೆಗೆಡಿಸಿದ ರೈಲ್ವೆ

ಭೂಸ್ವಾಧೀನ ಅಧಿಸೂಚನೆ ಬೆನ್ನಲ್ಲೇ ಗ್ರಾಮಸ್ಥರಲ್ಲಿ ಆತಂಕ

ಅಂಕೋಲಾ/ಯಲ್ಲಾಪುರ: ಉತ್ತರ ಕರ್ನಾಟಕವನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ವರ್ಷಗಳಿಂದ ಚರ್ಚೆ, ವಿರೋಧ, ಪರಿಸರ ಸಂಬಂಧಿತ ತಕರಾರುಗಳ ನಡುವೆ ನನೆಗುದಿಗೆ ಬಿದ್ದಿದ್ದ ಯೋಜನೆ ಇದೀಗ ಭೂಸ್ವಾಧೀನ ಅಧಿಸೂಚನೆಯ ಹಂತ ತಲುಪಿರುವುದು, ಯೋಜನೆಯ ವ್ಯಾಪ್ತಿಯ ಗ್ರಾಮಸ್ಥರಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ, ಕಲಘಟಗಿ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳ ವ್ಯಾಪ್ತಿಯಲ್ಲಿ ರೈಲ್ವೆ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ನೈಋತ್ಯ ರೈಲ್ವೆ ವಲಯ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಹೊರಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಮನೆ, ಜಮೀನು, ತೋಟ ಹಾಗೂ ಬದುಕಿನ ಮೇಲೆ ಯೋಜನೆಯ ಪರಿಣಾಮ ಏನಾಗಬಹುದು ಎಂಬ ಚಿಂತೆ ಈ ಭಾಗದ ಗ್ರಾಮಸ್ಥರನ್ನು ಕಾಡತೊಡಗಿದೆ.

ಒಟ್ಟು 163 ಕಿ.ಮೀ ಉದ್ದದ ವಿದ್ಯುದ್ದೀಕರಣ ಸಹಿತ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ಇದಾಗಿದ್ದು, ಯೋಜನೆಯ ಅಂದಾಜು ವೆಚ್ಚ ₹16,435 ಕೋಟಿ ಎಂದು ತಿಳಿಸಲಾಗಿದೆ. ಯೋಜನೆಗಾಗಿ ಹುಬ್ಬಳ್ಳಿ ತಾಲೂಕಿನ 13, ಕಲಘಟಗಿ ತಾಲೂಕಿನ 13, ಯಲ್ಲಾಪುರ ತಾಲೂಕಿನ 24 ಹಾಗೂ ಅಂಕೋಲಾ ತಾಲೂಕಿನ 16 ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

ಯಲ್ಲಾಪುರದಲ್ಲಿ 24 ಗ್ರಾಮಗಳು

ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪದಮನೆ, ಹಿತ್ತಲಕಾರಗದ್ದೆ, ಇಡಗುಂದಿ, ಜೋಗದಮನೆ, ಕೋಮಡಿ, ಅರಬೈಲ, ತೇಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಗಾಂವ, ಗುಳ್ಳಾಪುರ, ಕೊಡ್ಲಗದ್ದೆ, ಕಳಚೆ ಹಾಗೂ ಮಾವಿನಮನೆ ಗ್ರಾಮಗಳು ಅಧಿಸೂಚನೆಯ ವ್ಯಾಪ್ತಿಯಲ್ಲಿವೆ.

ಅಂಕೋಲಾದಲ್ಲೂ 16 ಗ್ರಾಮಗಳು

ಅಂಕೋಲಾ ತಾಲೂಕಿನ ಸುಂಕಸಾಳ, ಕಟ್ಟಿನಹಕ್ಕಲು, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗಾರಮಕ್ಕಿಗದ್ದೆ, ಅದ್ದೂರ, ನಾವಗದ್ದೆ, ಬೊಗ್ರಿಬೈಲ್, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ ಗ್ರಾಮಗಳ ವ್ಯಾಪ್ತಿಯಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಬಿದ್ದಿದೆ.

ರೈಲ್ವೆ ಯೋಜನೆ ಜಾರಿಯಾದರೆ ಉತ್ತರ ಕರ್ನಾಟಕದಿಂದ ಕರಾವಳಿಗೆ ಸಂಪರ್ಕ ಸುಧಾರಿಸುವುದರ ಜೊತೆಗೆ ಸರಕು ಸಾಗಣೆ, ಕೈಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಬಹುದು ಎಂಬ ನಿರೀಕ್ಷೆಯಿದೆ. ಆದರೆ ಮತ್ತೊಂದೆಡೆ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ, ಅರಣ್ಯ ಹಾಗೂ ಕೃಷಿ ಭೂಮಿಯ ಮೇಲಿನ ಪರಿಣಾಮ ಮತ್ತು ಸ್ಥಳೀಯರ ಬದುಕಿನ ಮೇಲೆ ಬೀರುವ ಬದಲಾವಣೆಗಳ ಬಗ್ಗೆ ಈಗಾಗಲೇ ಹಲವು ಪ್ರಶ್ನೆಗಳಿವೆ.

ಇದೀಗ ಭೂಸ್ವಾಧೀನ ಅಧಿಸೂಚನೆಯೇ ಹೊರಬಿದ್ದಿರುವುದರಿಂದ ಈ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಯಾವ ಗ್ರಾಮದಲ್ಲಿ ಎಷ್ಟು ಭೂಮಿ ಸ್ವಾಧೀನವಾಗಲಿದೆ, ಯಾರ ಜಮೀನು ಯೋಜನೆಯ ವ್ಯಾಪ್ತಿಗೆ ಬರಲಿದೆ, ಪರಿಹಾರ ಹೇಗೆ ನಿಗದಿಯಾಗಲಿದೆ, ಮನೆ, ತೋಟ ಹಾಗೂ ಕೃಷಿ ಭೂಮಿ ಕಳೆದುಕೊಳ್ಳುವವರಿಗೆ ಏನು ಪರ್ಯಾಯ ವ್ಯವಸ್ಥೆ ಎಂಬ ಪ್ರಶ್ನೆಗಳಿಗೆ ಗ್ರಾಮಸ್ಥರು ಸ್ಪಷ್ಟ ಉತ್ತರ ನಿರೀಕ್ಷಿಸುತ್ತಿದ್ದಾರೆ.

ಒಂದೆಡೆ ರೈಲು ಸಂಪರ್ಕದ ನಿರೀಕ್ಷೆ, ಮತ್ತೊಂದೆಡೆ ತಮ್ಮ ನೆಲ-ಜಲ-ಜೀವನದ ಬಗ್ಗೆ ಆತಂಕ—ಹುಬ್ಬಳ್ಳಿ–ಅಂಕೋಲಾ ರೈಲ್ವೆ ಯೋಜನೆಯ ಭೂಸ್ವಾಧೀನ ಅಧಿಸೂಚನೆ ಈ ಭಾಗದ ಗ್ರಾಮಸ್ಥರನ್ನು ಮತ್ತೊಮ್ಮೆ ದ್ವಂದ್ವದ ಸ್ಥಿತಿಗೆ ತಂದು ನಿಲ್ಲಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share