ಯಲ್ಲಾಪುರ: ಶಾಸಕ ಶಿವರಾಮ ಅವರದ್ದು ‘ಕೈಲಾಗದವ ಮೈ ಪರಚಿಕೊಂಡ, ಕುಣಿಯಲಾರದವನಿಗೆ ಅಂಕಣ ಡೊಂಕು’ ಎಂಬಂತಹ ಸ್ಥಿತಿ. ಜಿಲ್ಲೆಯ ಸ್ವಜಾತಿ ಬಿಜೆಪಿ ನಾಯಕರು ತಮ್ಮನ್ನು ಸೋಲಿಸಲು ಪ್ರಯತ್ನ ಮಾಡಿದರು ಎಂಬ ಹಾರಿಕೆ ಅರೋಪ ಅವರ ಹತಾಶೆಯ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ; ನನ್ನನ್ನು ಸೋಲಿಸಲು ಸ್ವಜಾತಿ ನಾಯಕರಿಂದಲೇ ಸಂಚು!
https://canaranext.com/shivaram-hebbar-bjp-leaders-conspiracy-defeat-allegation/
ಶಾಸಕ ಶಿವರಾಮ ಹೆಬ್ಬಾರರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಅದೇಕೋ ಶಿವರಾಮ ಹೆಬ್ಬಾರ ಅವರಿಗೆ ಇದ್ದಕ್ಕಿದಂತೆ ಬಿಜೆಪಿ ಸಖ್ಯ ನೆನಪಾಗುತ್ತಿರುವಂತೆ ತೋರುತ್ತಿದೆ. ಇದೆಲ್ಲ ನಿರೀಕ್ಷಿತ ಬೆಳವಣಿಗೆ. ತನಗೆ ಕೆಲವರು ಕಿರುಕುಳ ನೀಡಿ ಬಿಜೆಪಿ ತೊರೆಯುವಂತೆ ಮಾಡಿದರು ಎನ್ನುವ ಹೆಬ್ಬಾರರಿಗೆ ಕಾಂಗ್ರೆಸಿನಲ್ಲಿ ರತ್ನ ಗಂಬಳಿ ಹಾಸಿ ಸ್ವಾಗತ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸೇರಲು ಯತ್ನಿಸುತ್ತಿರುವ ಶಾಸಕ ಹೆಬ್ಬಾರ್ ಮತ್ತು ಅವರ ಪರಿವಾರದ ಬಗ್ಗೆ ಆ ಪಕ್ಷದ ಹಿರಿಯ ನಾಯಕರಾದ ಆರ್.ವಿ. ದೇಶಪಾಂಡೆ, ಶಾಸಕ ಭೀಮಣ್ಣ ನಾಯ್ಕ, ಮಂಕಾಳ್ ವೈದ್ಯ ಮುಂತಾದ ನಾಯಕರು ಆರಂಭದಲ್ಲೇ ಏನು ಹೇಳಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳಬೇಕು.
ಕಾಂಗ್ರೆಸ್ಸಿಗೆ ಹೆಬ್ಬಾರ್ ಆಗಮನದ ಬಗ್ಗೆ ಯಲ್ಲಾಪುರ ಮುಂಡಗೋಡು ಕ್ಷೇತ್ರದ ಮೂಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಏನು ಹೇಳುತ್ತಿದ್ದಾರೆ ಎಂಬುದನ್ನು ಪ್ರಾಮಾಣಿಕವಾಗಿ ಆಲೋಚನೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಾಗುವ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕು ಎಂದು ಹರಿಪ್ರಕಾಶ ಮಾರ್ಮಿಕವಾಗಿ ಹೇಳಿದ್ದಾರೆ.
ಇನ್ನು ಜಿಲ್ಲೆಯ ಸ್ವಜಾತಿ ಹಿರಿಯ ನಾಯಕರು ಈ ಹಿಂದಿನ ಚುನಾವಣೆಯಲ್ಲಿ ತನ್ನನ್ನು ಸೋಲಿಸಲು ಯತ್ನಿಸಿದರು ಎಂಬ ಹೆಬ್ಬಾರ್ ಹೇಳಿಕೆ ವಿಚಾರವಾಗಿ, ಬಿಜೆಪಿಯಲ್ಲಿ ಅಂಥಹ ನಾಯಕರು ಇರುವುದು ನಮಗ್ಯಾರಿಗೂ ಗೊತ್ತಿಲ್ಲ. ಇದು ಅತ್ಯಂತ ಬಾಲಿಶತನದ ಹೇಳಿಕೆ.
ಚುನಾವಣೆ ಮುಗಿದ ಮಾರನೇ ದಿನ ಹೆಬ್ಬಾರರು ಸ್ಥಳೀಯ ಕಾರ್ಯಕರ್ತರ ಮೇಲೆ ಹರಿಹಾಯ್ದಿದ್ದರು. ಈಗ ಹಿರಿಯ ನಾಯಕರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹಾಗೊಮ್ಮೆ ಇರುವುದೇ ಆದರೆ ಅಂಥವರ ಹೆಸರು ಹೇಳುವುದಕ್ಕೆ ಹೆಬ್ಬಾರರರಿಗೆ ಏನು ಸಮಸ್ಯೆ? ಪರೋಕ್ಷವಾಗಿ ಟೀಕೆ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ತನ್ನನ್ನು ಈಗಲೂ ಕೆಲ ಬಿಜೆಪಿ ಪ್ರಮುಖರು ವಾಪಸ್ ಬಿಜೆಪಿಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹೆಬ್ಬಾರ ಹೇಳಿದ್ದಾರೆ. ನಮಗಂತೂ ಆ ವಿಚಾರ ಗೊತ್ತಿಲ್ಲ. ಹೆಬ್ಬಾರ್ ಅವರು ಬಿಜೆಪಿಗೆ ಬರುವ ಪೂರ್ವದಲ್ಲೂ ಯಲ್ಲಾಪುರ ಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು, ಮುಂದೆಯೂ ಗೆಲ್ಲುತ್ತದೆ. ಇಲ್ಲಿ ವ್ಯಕ್ತಿ ಪಾರಮ್ಯದ ಅಗತ್ಯತೆ ಇಲ್ಲ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.


