Friday, July 24, 2026
Join WhatsApp Group
HomeLocal Newsರಸ್ತೆಯಲ್ಲೆ ಮಲಗಿದ ಬೃಹತ್‌ ಲಾರಿ

ರಸ್ತೆಯಲ್ಲೆ ಮಲಗಿದ ಬೃಹತ್‌ ಲಾರಿ

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣಕ್ಕೆ ಸಾಗಿಸಲಾಗುತ್ತಿದ್ದ ಭಾರೀ ಯಂತ್ರೋಪಕರಣಗಳನ್ನು ಹೊತ್ತ ಟ್ರಾಲಿಯೊಂದು ಕೈಗಾ ಸಮೀಪ ಪಲ್ಟಿಯಾದ ಘಟನೆ ಗುರುವಾರ ಸಂಜೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕೈಗಾದಿಂದ ಸುಮಾರು 10 ಕಿ.ಮೀ ದೂರದ ಹರ್ಟುಗಾ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಭಾರೀ ಗಾತ್ರದ ಮಲ್ಟಿ-ವೀಲರ್ ಟ್ರಾಲಿ ತಿರುವು ಪಡೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದೆ. ವಾಹನ ನಿಧಾನಗತಿಯಲ್ಲಿ ಚಲಿಸುತ್ತಿದ್ದರೂ, ಅತಿಭಾರದಿಂದಾಗಿ ಸಮತೋಲನ ಕಳೆದುಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

ಟ್ರಾಲಿ ಪಲ್ಟಿಯಾಗುತ್ತಿದ್ದಂತೆ ಭಾರೀ ಶಬ್ದ ಕೇಳಿಬಂದಿದ್ದು, ಸುತ್ತಮುತ್ತಲಿನ ಜನರು ಕೆಲಕಾಲ ಗಾಬರಿಗೊಂಡಿದ್ದರು. ಆದರೆ ಘಟನೆಯಲ್ಲಿ ಚಾಲಕ ಸೇರಿ ಯಾರಿಗೂ ಗಾಯಗಳಾಗಿಲ್ಲ ಎಂಬುದು ಸಮಾಧಾನದ ಸಂಗತಿ.

ಆದರೆ ಟ್ರಾಲಿ ಹಾಗೂ ಅದರಲ್ಲಿದ್ದ ಯಂತ್ರೋಪಕರಣಗಳು ರಸ್ತೆಯನ್ನೇ ಸಂಪೂರ್ಣ ಆವರಿಸಿಕೊಂಡಿರುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಭಾರೀ ಗಾತ್ರದ ಯಂತ್ರೋಪಕರಣಗಳನ್ನು ತೆರವುಗೊಳಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಯಂತ್ರೋಪಕರಣಗಳನ್ನು ಉತ್ತರ ಭಾರತದಿಂದ ಭದ್ರತೆಯೊಂದಿಗೆ ಕೈಗಾಕ್ಕೆ ಸಾಗಿಸಲಾಗುತ್ತಿತ್ತು. ಸುಮಾರು ಎರಡು ವಾರಗಳ ಹಿಂದೆ ಇದೇ ಭಾರೀ ವಾಹನ ಕಾರವಾರ ನಗರ ಮೂಲಕ ಹಾದುಹೋಗಿದ್ದಾಗ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. “ಇಂತಹ ಅತಿಭಾರ ವಾಹನಗಳಿಂದ ರಸ್ತೆ ಹಾನಿಯಾಗಬಹುದು” ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿಬಂದಿತ್ತು.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟ್ರಾಲಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share