ಹೊನ್ನಾವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಕಲವಕ್ಕಿ ಸಮೀಪ ನಡೆದಿದೆ.
ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಲವಕ್ಕಿ ನಿವಾಸಿ ಗಣೇಶ ಹೆಗಡೆ (67) ಅವರ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಕರಾಗಿರುವ ಈಶ್ವರ ನಾರಾಯಣ ಹೆಗಡೆ (90) ಅವರು ಬಂದಿದ್ದರು. ಮೇ 4ರಂದು ಸಂಜೆ ಸುಮಾರಿಗೆ ಅವರು ಮನೆಯ ಮುಂದೆ ರಸ್ತೆ ದಾಟುವಾಗ, ಹೊನ್ನಾವರದಿಂದ ಹಡಿನಬಾಳ ಕಡೆಗೆ ತೆರಳುತ್ತಿದ್ದ ಕೆಎ-14/ಇಡಿ-0327 ಸಂಖ್ಯೆಯ ಮೋಟಾರ್ ಸೈಕಲ್ ಸವಾರನು ದುಡುಕು ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ಪರಿಣಾಮ ಈಶ್ವರ ಹೆಗಡೆ ಅವರು ರಸ್ತೆ ಮೇಲೆ ಬಿದ್ದು ತಲೆ, ಕೈ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಅವರನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯ ಬಳಿಕ ಬೈಕ್ ಸವಾರನು ತನ್ನ ಹೆಸರು-ವಿಳಾಸ ತಿಳಿಸದೇ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.