ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಕೈಗೆತ್ತಿಕೊಳ್ಳುತ್ತೀರಿ. ಒಂದು ಕಡೆ ಗುಡ್‌ಮಾರ್ನಿಂಗ್ ಮೆಸೇಜ್, ಮತ್ತೊಂದು ಕಡೆ ಬ್ಯಾಂಕ್ ಮೆಸೇಜ್, ಇನ್ನೊಂದೆಡೆ ಯಾವುದೋ ಆಫರ್… ಇವೆಲ್ಲದರ ನಡುವೆ ನಿಮಗೆ ಪರಿಚಯವೇ ಇಲ್ಲದ ನಂಬರ್‌ನಿಂದ ಒಂದು ಕರೆ. “ನಿಮಗೆ ಲೋನ್ ಬೇಕಾ?”, “ಆಫರ್ ಬಂದಿದೆ”, “ಈ ಲಿಂಕ್ ಕ್ಲಿಕ್ ಮಾಡಿ” ಎನ್ನುವ ಸಂದೇಶಗಳು. ಆಗ ನಮ್ಮ ತಲೆಯಲ್ಲಿ ಬರುವ ಮೊದಲ ಪ್ರಶ್ನೆ, ನನ್ನ ಮೊಬೈಲ್ ನಂಬರ್ ಇವರಿಗೆ ಹೇಗೆ ಸಿಕ್ಕಿತು? ನಿಜ ಹೇಳಬೇಕೆಂದರೆ, ನಿಮ್ಮ ನಂಬರ್ ಎಲ್ಲೋ ಒಂದೇ ಕಡೆ ಲೀಕ್ ಆಗಿರಬೇಕೆಂದೇನಿಲ್ಲ. ನಾವು ಪ್ರತಿದಿನ ಅದನ್ನು ಒಂದಲ್ಲ, ಹತ್ತಾರು ಕಡೆ ಹಂಚಿಕೊಳ್ಳುತ್ತಿರುತ್ತೇವೆ!
ಮೊದಲನೆಯದಾಗಿ, ನೀವು ಮೊಬೈಲ್ ಸಿಮ್ ತೆಗೆದುಕೊಳ್ಳುವಾಗಲೇ ನಿಮ್ಮ ಹೆಸರು, ನಂಬರ್ ಸೇರಿದಂತೆ ಹಲವು ಮಾಹಿತಿಗಳು ಟೆಲಿಕಾಂ ಕಂಪನಿಯ ಬಳಿ ದಾಖಲಾಗುತ್ತವೆ. ಕಂಪನಿಗಳು ತಮ್ಮ ಸೇವೆ ಮತ್ತು ನಿಯಮಾನುಸಾರ ಮಾರ್ಕೆಟಿಂಗ್ ಉದ್ದೇಶಗಳಿಗೂ ಗ್ರಾಹಕರ ಮಾಹಿತಿಯನ್ನು ಬಳಸಬಹುದು. ಹೀಗಾಗಿ ಹೊಸ ಮೊಬೈಲ್ ಸಂಪರ್ಕ ಪಡೆಯುವಾಗ ಗೌಪ್ಯತಾ ನಿಯಮಗಳನ್ನು ಒಮ್ಮೆ ಓದುವುದು ಒಳ್ಳೆಯದು.
ಇನ್ನು ಆನ್‌ಲೈನ್ ಶಾಪಿಂಗ್ ಮಾಡುವಾಗ, ಯಾವುದಾದರೂ ವೆಬ್‌ಸೈಟ್‌ನಲ್ಲಿ ಖಾತೆ ತೆಗೆಯುವಾಗ, ಆಫರ್ ಪಡೆಯುವಾಗ, ಸಮೀಕ್ಷೆ ತುಂಬುವಾಗ ಎಲ್ಲೆಡೆ ಮೊಬೈಲ್ ನಂಬರ್ ಕೇಳುತ್ತಾರೆ. “ನಂಬರ್ ಕೊಟ್ಟರೆ ಮಾತ್ರ ಮುಂದಕ್ಕೆ ಹೋಗಬಹುದು” ಎಂದು ನಾವು ಕೊಟ್ಟುಬಿಡುತ್ತೇವೆ. ಹೀಗೆ ನಮ್ಮ ನಂಬರ್ ಎಷ್ಟು ವೆಬ್‌ಸೈಟ್ ಮತ್ತು ಸೇವೆಗಳ ಬಳಿ ದಾಖಲಾಗಿದೆ ಎನ್ನುವುದೇ ನಮಗೆ ಗೊತ್ತಿರುವುದಿಲ್ಲ. ಯಾವುದಾದರೂ ಸಂಸ್ಥೆಯ ಡೇಟಾಬೇಸ್‌ಗೆ ಕನ್ನ ಹಾಕಿದರೆ, ಅಲ್ಲಿ ಇರುವ ನಂಬರ್‌ಗಳು ಅಪರಿಚಿತರ ಕೈ ಸೇರುವ ಸಾಧ್ಯತೆಯೂ ಇರುತ್ತದೆ.
ಇನ್ನೊಂದು ಮಜವಾದ ಸಂಗತಿ ಗೊತ್ತೇ? ನಿಮ್ಮ ನಂಬರ್ ಅನ್ನು ನೀವು ಯಾರಿಗಾದರೂ ಕೊಡದಿದ್ದರೂ, ಬೇರೆಯವರ ಫೋನ್ ಮೂಲಕ ಅದು ಯಾವುದಾದರೂ ಆ್ಯಪ್‌ಗೆ ತಲುಪಿರಬಹುದು! ಕೆಲವು ಆ್ಯಪ್‌ಗಳು Contacts permission ಕೇಳುತ್ತವೆ. ಅನುಮತಿ ಕೊಟ್ಟರೆ ಆ್ಯಪ್‌ಗೆ ನಿಮ್ಮ ಫೋನ್‌ಬುಕ್‌ನಲ್ಲಿ ಸೇವ್ ಆಗಿರುವ ನಂಬರ್‌ಗಳನ್ನು ನೋಡುವ ಅವಕಾಶ ಸಿಗುತ್ತದೆ. ಆದ್ದರಿಂದ ಪ್ರತಿಯೊಂದು ಆ್ಯಪ್‌ಗೂ “Allow” ಒತ್ತುವ ಮೊದಲು, ಅದಕ್ಕೆ ನಿಜವಾಗಿಯೂ Contacts ಬೇಕೇ ಎಂದು ಯೋಚಿಸಿ.
ಇದರ ಜೊತೆಗೆ ಟೆಲಿಕಾಂ ಅಥವಾ ಬೇರೆ ಸಂಸ್ಥೆಗಳ ಸಿಸ್ಟಮ್‌ಗಳಿಗೆ ಸೈಬರ್ ದಾಳಿ ನಡೆದರೂ ಡೇಟಾ ಸೋರಿಕೆಯಾಗುವ ಅಪಾಯವಿದೆ. ಅಂಥ ಸಂದರ್ಭದಲ್ಲಿ ಮೊಬೈಲ್ ನಂಬರ್ ಮಾತ್ರವಲ್ಲದೆ ಹೆಸರು, ವಿಳಾಸ ಸೇರಿದಂತೆ ಇತರ ಮಾಹಿತಿಯೂ ಹೊರಗೆ ಹೋಗಬಹುದು.
ಹಾಗಾದರೆ ನಮ್ಮ ನಂಬರ್ ಅನ್ನು ಹೇಗೆ ಕಾಪಾಡಿಕೊಳ್ಳಬೇಕು? ತುಂಬಾ ಕಷ್ಟವೇನಿಲ್ಲ. ಎಲ್ಲೆಂದರಲ್ಲಿ ನಂಬರ್ ನೀಡಬೇಡಿ. ಅಗತ್ಯವಿಲ್ಲದ ಆ್ಯಪ್‌ಗಳಿಗೆ Contacts permission ಕೊಡಬೇಡಿ. ಫೋನ್‌ನ Settingsಗೆ ಹೋಗಿ ಈಗಾಗಲೇ ಯಾವೆಲ್ಲ ಆ್ಯಪ್‌ಗಳಿಗೆ ಈ ಅನುಮತಿ ನೀಡಿದ್ದೀರಿ ಎಂದು ಒಮ್ಮೆ ಪರಿಶೀಲಿಸಿ. ಮೊಬೈಲ್ ಆಪರೇಟರ್‌ನ Privacy ಮತ್ತು Data Sharing ಆಯ್ಕೆಗಳನ್ನೂ ಪರಿಶೀಲಿಸಿ. ಆನ್‌ಲೈನ್‌ನಲ್ಲಿ ನೋಂದಣಿ ಮಾಡುವಾಗ ಸಾಧ್ಯವಾದರೆ ಪ್ರತ್ಯೇಕ ನಂಬರ್ ಬಳಸುವುದೂ ಉಪಯುಕ್ತ.
ಕೊನೆಗೆ ಒಂದು ಸಣ್ಣ ಎಚ್ಚರಿಕೆ. ನಿಮ್ಮ ನಂಬರ್‌ಗೆ ಬಂದ ಪ್ರತಿಯೊಂದು ಕರೆಗೂ ಉತ್ತರಿಸಬೇಕಿಲ್ಲ, ಪ್ರತಿಯೊಂದು ಮೆಸೇಜ್‌ಗೂ ಪ್ರತಿಕ್ರಿಯಿಸಬೇಕಿಲ್ಲ, ಅಪರಿಚಿತ ಲಿಂಕ್ ಕ್ಲಿಕ್ ಮಾಡುವದಂತೂ ಬೇಡವೇ ಬೇಡ. ಏಕೆಂದರೆ ನಿಮ್ಮ ಮೊಬೈಲ್ ನಂಬರ್ ಯಾರ ಕೈಯಲ್ಲಿದೆ ಎನ್ನುವುದನ್ನು ಹುಡುಕಲು ಯಾವಾಗಲೂ ಸಾಧ್ಯವಿಲ್ಲ. ಆದರೆ ಅದನ್ನು ಎಲ್ಲೆಲ್ಲಿ ಹಂಚಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುವ ಆಯ್ಕೆ ಮಾತ್ರ ನಿಮ್ಮ ಕೈಯಲ್ಲಿದೆ.