ಶಿರಸಿ: ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿ, ನದಿಗಳ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ.
“ಬೇಡ್ತಿ–ವರದಾ, ಅಘನಾಶಿನಿ–ವೇದಾವತಿ ನದಿ ಜೋಡಣೆ ಬೇಡ; ಬೇಡ್ತಿ ನದಿ ಉಳಿಸಿ” ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಅಭಿಯಾನಕ್ಕೆ ಶಿರಸಿಯ ಪಟವರ್ಧನ ಆಯುರ್ವೇದ ಕ್ಲಿನಿಕ್‌ನಲ್ಲಿ ಮಾಜಿ ಸೈನಿಕ ಸುಬೇದಾರ್ ಈ. ರಾಮು ಅವರು ಸಹಿ ಮಾಡುವ ಮೂಲಕ ಚಾಲನೆ ನೀಡಿದರು.
ಬೇಡ್ತಿ ಸೇರಿದಂತೆ ಮಲೆನಾಡಿನ ನದಿಗಳು ಕೇವಲ ನೀರಿನ ಮೂಲಗಳಲ್ಲ. ಅವು ಇಲ್ಲಿನ ಅರಣ್ಯ, ಕೃಷಿ, ಜೀವವೈವಿಧ್ಯ ಹಾಗೂ ಸ್ಥಳೀಯ ಜನಜೀವನದೊಂದಿಗೆ ನೇರವಾಗಿ ಬೆಸೆದುಕೊಂಡಿವೆ. ಹೀಗಾಗಿ ನದಿಗಳ ನೈಸರ್ಗಿಕ ಹರಿವಿನಲ್ಲಿ ಬದಲಾವಣೆ ತರುವ ಯಾವುದೇ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಚರ್ಚೆ ಹಾಗೂ ಜಾಗೃತಿ ಅಗತ್ಯ ಎಂಬ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
“ನದಿ ಉಳಿಸಿ, ಕಾಡು ಉಳಿಸಿ, ಪರಿಸರ ಉಳಿಸಿ, ಭವಿಷ್ಯ ಉಳಿಸಿ” ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ದಾಖಲಿಸುವಂತೆ ಮನವಿ ಮಾಡಲಾಗಿದೆ.