Thursday, July 23, 2026
Join WhatsApp Group
HomeNationalಇಂತಹ ಸಿಸಿಟಿವಿಗಳಿಗಿದೆ ಚೀನಾ ಲಿಂಕ್!

ಇಂತಹ ಸಿಸಿಟಿವಿಗಳಿಗಿದೆ ಚೀನಾ ಲಿಂಕ್!

ನಿಮ್ಮಲ್ಲೂ ಇನ್ಸ್ಟಾಲ್‌ ಆಗಿದೆಯಾ ಚೆಕ್‌ ಮಾಡಿ

ನವದೆಹಲಿ: ರಾಷ್ಟ್ರೀಯ ಭದ್ರತೆ ಬಲಪಡಿಸುವುದು ಹಾಗೂ ಸೈಬರ್ ಭದ್ರತಾ ಅಪಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರ ಇಂಟರ್‌ನೆಟ್ ಸಂಪರ್ಕ ಹೊಂದಿರುವ ಸಿಸಿಟಿವಿ ಕ್ಯಾಮೆರಾಗಳ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.

ಈ ಹೊಸ ನಿಯಮಗಳು ಏಪ್ರಿಲ್ 1, 2026ರಿಂದ ದೇಶಾದ್ಯಂತ ಅನ್ವಯವಾಗಲಿವೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಎಲ್ಲಾ ಇಂಟರ್‌ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾಗಳು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ Standardisation Testing and Quality Certification (STQC) ಮಾನ್ಯತೆ ಪಡೆಯಬೇಕು.

ಉತ್ಪಾದಕರು ತಮ್ಮ ಸಾಧನಗಳಲ್ಲಿ ಬಳಸುವ ಪ್ರಮುಖ ಉಪಕರಣಗಳ ಬಗ್ಗೆ, ವಿಶೇಷವಾಗಿ ಸಿಸ್ಟಮ್-ಆನ್-ಚಿಪ್ (SoC) ಅಥವಾ ಪ್ರೊಸೆಸರ್ ಮೂಲದ ವಿವರಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ.

STQC ಪರೀಕ್ಷೆಯ ಅಡಿಯಲ್ಲಿ ಕ್ಯಾಮೆರಾಗಳನ್ನು ಎನ್‌ಕ್ರಿಪ್ಷನ್ ತಂತ್ರಜ್ಞಾನ, ಹಾರ್ಡ್‌ವೇರ್ ಮೂಲ, ಫರ್ಮ್‌ವೇರ್ ಭದ್ರತೆ, ಹ್ಯಾಕಿಂಗ್ ವಿರುದ್ಧದ ಪ್ರತಿರೋಧ ಹಾಗೂ ದೂರದಿಂದ ಡೇಟಾ ಪ್ರವೇಶ ಸಾಧ್ಯತೆಗಳಂತಹ ಅಂಶಗಳ ಮೇಲೆ ಪರೀಕ್ಷಿಸಲಾಗುತ್ತದೆ.

ಭಾರತದಲ್ಲೇ ಅಸೆಂಬಲ್ ಮಾಡಲಾಗುವ ಸಾಧನಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಮಾನ್ಯತೆ ಪಡೆಯದ ಉತ್ಪನ್ನಗಳನ್ನು ದೇಶದಲ್ಲಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ.

ಈ ನಿಯಮಗಳು ಚೀನಾದ ಪ್ರಮುಖ ಸಿಸಿಟಿವಿ ಕಂಪನಿಗಳಾದ Hikvision, TP-Link ಮತ್ತು Dahua Technology ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇವುಗಳು ಭಾರತದಲ್ಲಿ ಸಿಸಿಟಿವಿ ಮಾರುಕಟ್ಟೆಯ ಪ್ರಮುಖ ಪಾಲನ್ನು ಹೊಂದಿದ್ದವು.

ಇದರಿಂದ ಈಗಾಗಲೇ ಬಳಕೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಮೇಲೆ ಯಾವುದೇ ತಕ್ಷಣದ ಪರಿಣಾಮ ಇರುವುದಿಲ್ಲ. ಅವು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಭವಿಷ್ಯದಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್ ಮತ್ತು ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದರಲ್ಲಿ ಭಾರತೀಯ ಕಂಪನಿಗಳಾದ CP Plus, Prama, Quobo, Matrix ಮತ್ತು Sparsh ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಮಾರುಕಟ್ಟೆಯಲ್ಲಿ ಸುಮಾರು ಶೇ. 80 ಪಾಲನ್ನು ಪಡೆದಿವೆ.

ಆದರೆ ಹೊಸ ನಿಯಮಗಳ ಅನುಸರಣೆ ವೆಚ್ಚ ಹಾಗೂ ಸರಬರಾಜುದಾರರ ಸಂಖ್ಯೆ ಕಡಿಮೆಯಾಗುವ ಕಾರಣ ಸಿಸಿಟಿವಿ ಕ್ಯಾಮೆರಾಗಳ ಬೆಲೆಯಲ್ಲಿ ಏರಿಕೆ ಸಂಭವಿಸುವ ಸಾಧ್ಯತೆ ಇದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share