ಶಿರಸಿ: ಜಿಲ್ಲೆಯ ಪರಿಸರ ಮತ್ತು ಜನರ ಬದುಕಿನ ಭಾವನೆಗಳಿಗೆ ಕಿಂಚಿತ್ತೂ ಬೆಲೆ ನೀಡದ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕರ ದ್ವಿಮುಖ ನೀತಿಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನರ ಮುಂದೆ ಯೋಜನೆಗಳನ್ನು ವಿರೋಧಿಸುವಂತೆ ನಟಿಸಿ, ತೆರೆಮರೆಯಲ್ಲಿ ಗ್ರೀನ್ ಸಿಗ್ನಲ್ ನೀಡುವ ರಾಜಕೀಯ ನಾಟಕ ಹೆಚ್ಚು ದಿನ ನಡೆಯದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದ್ದಾರೆ.
ಶಿರಸಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹವರ ಬಣ್ಣ ಬಯಲು ಮಾಡಿ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಬೇಡ್ತಿ–ಅಘನಾಶಿನಿ ನದಿ ತಿರುವು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಅದೇಕೆ ಅಷ್ಟೊಂದು ಧಾವಂತ ತೋರುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪಶ್ಚಿಮ ಘಟ್ಟಗಳ ಧಾರಣಾ ಸಾಮರ್ಥ್ಯದ ಸಮಗ್ರ ಅಧ್ಯಯನ ನಡೆಸಬೇಕು ಎಂಬುದು ಪರಿಸರ ವಿಜ್ಞಾನಿಗಳು, ತಜ್ಞರು ಹಾಗೂ ಸ್ಥಳೀಯರ ಬಹುಕಾಲದ ಆಗ್ರಹ. ಆದರೆ, ಈ ಒತ್ತಾಯಕ್ಕೆ ಕಿಂಚಿತ್ತೂ ಬೆಲೆ ನೀಡದೆ ಸರ್ಕಾರ ವಿನಾಶಕಾರಿ ಎಂದು ಕರೆದಿರುವ ಯೋಜನೆಗಳ ಅನುಷ್ಠಾನಕ್ಕೆ ಬೆನ್ನುಬಿದ್ದಿದೆ ಎಂದು ಆರೋಪಿಸಿದರು.
ಹಿಂದೆ ಮಂಕಾಳು ವೈದ್ಯರು ಗೊಂದಲಮಯ ಹೇಳಿಕೆಗಳನ್ನು ನೀಡುವುದರಲ್ಲಿಯೇ ಪರಿಣಿತರು, ಹಾಗೆಯೇ ತಮ್ಮ ಸಮಯವನ್ನೂ ಕಳೆದಿದ್ದಾರೆ. ಇವರ ನಡುವೆ ಒಳ ಒಪ್ಪಂದ ಏನಿದೆಯೋ ಗೊತ್ತಿಲ್ಲ. ಸಿಎಂ ಡಿಕೆಶಿ ಕೇಂದ್ರ ಸಚಿವರನ್ನು ಭೇಟಿಯಾಗಿ ಒತ್ತಡ ಹೇರುವ ಅಗತ್ಯವೇನಿದೆ? ಅಧಿವೇಶನದಲ್ಲಿ ಎಲ್ಲರೂ ಮಾತನಾಡುತ್ತಾರೆ. ಸರ್ಕಾರದ ಮಟ್ಟದಲ್ಲಿ ಒತ್ತಡ ತರುವ ಪ್ರಯತ್ನವನ್ನು ಯಾವ ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳೇ ದೆಹಲಿಗೆ ತೆರಳಿ, ಈ ಯೋಜನೆಗಳಿಗೆ ಹೇಗಾದರೂ ಅನುಮತಿ ನೀಡುವಂತೆ ಕೇಂದ್ರ ಸಚಿವರ ಮೇಲೆ ಒತ್ತಡ ಹೇರುತ್ತಿರುವುದರ ಹಿಂದಿನ ಮರ್ಮವೇನು? ಪಶ್ಚಿಮ ಘಟ್ಟಗಳ ಪರಿಸರ ಮತ್ತು ಸ್ಥಳೀಯರ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಮೊದಲೇ ಯೋಜನೆಗಳ ಅನುಷ್ಠಾನಕ್ಕೆ ಇಷ್ಟೊಂದು ಆತುರವೇಕೆ ಎಂದು ಕಾಗೇರಿ ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ವಿಧಾನಸಭೆಯ ಉಪಸಭಾಧ್ಯಕ್ಷರು ಇದ್ದರೂ ಈ ಯೋಜನೆಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ. ವೇದಿಕೆಗಳಲ್ಲಿ ನಿಂತು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವವರು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಡಿಪಿಆರ್ ರದ್ದುಪಡಿಸಿ, ಯೋಜನೆಗಳನ್ನು ನಿಲ್ಲಿಸುವಂತೆ ಒತ್ತಾಯಿಸುವ ಧೈರ್ಯ ತೋರುತ್ತಿಲ್ಲ ಎಂದು ದೂರಿದರು.
ಜಿಲ್ಲೆಯ ಪರಿಸರದ ವಿಚಾರದಲ್ಲಿ ಒಂದು ಕಡೆ ವಿರೋಧ ವ್ಯಕ್ತಪಡಿಸಿ, ಮತ್ತೊಂದೆಡೆ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುತ್ತಿರುವುದು ಯಾವ ರೀತಿಯ ರಾಜಕೀಯ ನಿಲುವು ಎಂಬುದನ್ನು ಜನರು ಪ್ರಶ್ನಿಸಬೇಕಿದೆ. ಈ ದ್ವಿಮುಖ ನೀತಿಯನ್ನು ಜನರ ಮುಂದಿಡುವ ಅಗತ್ಯವಿದೆ. ಇಂತಹ ರಾಜಕೀಯ ನಾಟಕಕ್ಕೆ ಜನರೇ ಅಂತ್ಯ ಹಾಡುವ ಕಾಲ ಬಂದಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.