Ad
Ad
Ad
Home Local News ಕದಂಬರ ಇತಿಹಾಸಕ್ಕೆ ಕಾದಂಬರಿ ರೂಪ!

ಕದಂಬರ ಇತಿಹಾಸಕ್ಕೆ ಕಾದಂಬರಿ ರೂಪ!

0
3

ಬನವಾಸಿಯಲ್ಲಿ ಮಾಹಿತಿ ಸಂಗ್ರಹಿಸಿದ ಪ್ರಕಾಶ ಹೆಗಡೆ

Ad

ಬನವಾಸಿ: ಕದಂಬರ ರಾಜಧಾನಿಯಾಗಿದ್ದ ಐತಿಹಾಸಿಕ ಬನವಾಸಿಯ ಇತಿಹಾಸ, ಧಾರ್ಮಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕಾದಂಬರಿಯ ಮೂಲಕ ಕಟ್ಟಿಕೊಡುವ ಉದ್ದೇಶದಿಂದ ಶಿರಸಿ ತಾಲೂಕಿನ ಕೆಂಚಗದ್ದೆಯ ಬರಹಗಾರ ಪ್ರಕಾಶ ಹೆಗಡೆ ಗುರುವಾರ ಬನವಾಸಿಗೆ ಭೇಟಿ ನೀಡಿ ಐತಿಹಾಸಿಕ ಮಾಹಿತಿ ಸಂಗ್ರಹಿಸಿದರು.

ಕದಂಬರ ಇತಿಹಾಸದ ಪ್ರಮುಖ ನೆಲೆಗಳಾದ ಬನವಾಸಿ ಮತ್ತು ಗುಡ್ನಾಪುರ ಭಾಗಗಳಲ್ಲಿ ಸಂಚರಿಸಿದ ಅವರು, ಅಲ್ಲಿನ ಸ್ಮಾರಕಗಳು, ಐತಿಹಾಸಿಕ ಕುರುಹುಗಳು ಹಾಗೂ ಸ್ಥಳೀಯ ಪರಂಪರೆಗೆ ಸಂಬಂಧಿಸಿದ ಮಾಹಿತಿಗಳನ್ನು ಕಲೆಹಾಕಿದರು.

ಕಾದಂಬರಿ ರಚನೆಗೆ ಅಗತ್ಯವಾದ ಹಿನ್ನೆಲೆಯನ್ನು ನೇರವಾಗಿ ಸ್ಥಳದಲ್ಲೇ ಅರಿತುಕೊಳ್ಳುವುದು ಈ ಭೇಟಿಯ ಉದ್ದೇಶವಾಗಿತ್ತು.ಇದಕ್ಕೂ ಮೂರು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ತಾಳಗುಂದಕ್ಕೆ ಭೇಟಿ ನೀಡಿದ್ದ ಪ್ರಕಾಶ ಹೆಗಡೆ, ಅಲ್ಲಿನ ಶಾಸನಗಳು ಮತ್ತು ಕದಂಬರ ಇತಿಹಾಸಕ್ಕೆ ಸಂಬಂಧಿಸಿದ ಕುರುಹುಗಳನ್ನು ಅಧ್ಯಯನ ಮಾಡಿದ್ದರು.

ಅದರ ಮುಂದುವರಿದ ಭಾಗವಾಗಿ ಬನವಾಸಿಗೆ ಆಗಮಿಸಿ, ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಸ್ಥಳಗಳ ಮಹತ್ವವನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಿದರು.ಕದಂಬ ವಂಶದ ಸ್ಥಾಪಕ ಮಯೂರವರ್ಮನ ಬದುಕು, ಕದಂಬರ ಸಾಹಸಗಾಥೆ ಹಾಗೂ ಕನ್ನಡ ನಾಡಿನ ಐತಿಹಾಸಿಕ ಅಸ್ಮಿತೆಯನ್ನು ಸಾಹಿತ್ಯದ ಮೂಲಕ ಓದುಗರಿಗೆ ಪರಿಚಯಿಸುವುದು ಅವರ ಉದ್ದೇಶವಾಗಿದೆ.

ಇತಿಹಾಸದ ಪುಟಗಳಲ್ಲಿ ಓದಿದ ಸಂಗತಿಗಳನ್ನು ಅವುಗಳ ಮೂಲ ನೆಲೆಯಲ್ಲೇ ಕಂಡು, ಸ್ಥಳೀಯ ಪರಂಪರೆ ಮತ್ತು ಲಭ್ಯ ಮಾಹಿತಿಗಳ ಆಧಾರದಲ್ಲಿ ಕಾದಂಬರಿಗೆ ರೂಪ ನೀಡಲು ಮುಂದಾಗಿದ್ದಾರೆ.

ಇದು ಕೇವಲ ಐತಿಹಾಸಿಕ ಸ್ಥಳಗಳ ಭೇಟಿಯಲ್ಲ. ಇತಿಹಾಸದ ಬೇರುಗಳನ್ನು ಸ್ಪರ್ಶಿಸಿ, ಅವುಗಳಿಗೆ ಅಕ್ಷರರೂಪ ನೀಡುವ ಸಾಹಿತ್ಯ ಪಯಣದ ಮಹತ್ವದ ಹೆಜ್ಜೆ ಎಂದು ಪ್ರಕಾಶ ಹೆಗಡೆ ಅಭಿಪ್ರಾಯಪಟ್ಟರು.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಉದ್ಯೋಗಿಯಾಗಿರುವ ಪ್ರಕಾಶ ಹೆಗಡೆ ಈ ಹಿಂದೆ ಪುಸ್ತಕವೊಂದನ್ನು ರಚಿಸಿದ್ದಾರೆ. ಇದೀಗ ಬನವಾಸಿಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಒಳಗೊಂಡ ಕಾದಂಬರಿ ರಚನೆಗೆ ಮುಂದಾಗಿರುವುದು ಸಾಹಿತ್ಯಾಸಕ್ತರಲ್ಲಿ ಕುತೂಹಲ ಮೂಡಿಸಿದೆ.

ಬನವಾಸಿ ಭೇಟಿಯ ವೇಳೆ ಸಾಮಾಜಿಕ ಕಾರ್ಯಕರ್ತ ಸಾಯಿರಾಮ ಕಾನಳ್ಳಿ ಸ್ಥಳೀಯ ಇತಿಹಾಸ ಮತ್ತು ಮಹತ್ವದ ಸಂಗತಿಗಳ ಕುರಿತು ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆಯ ರಾಕೇಶ್ ಮಸಾಲ್ಡಿ ಅಗತ್ಯ ಮಾಹಿತಿಗಳನ್ನು ಒದಗಿಸಿದರು. ವೆ. ಮೂ. ಮಹೇಶ್ ದೀಕ್ಷೀತ್ ಅವರು ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!