ಬೆಂಗಳೂರು: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯ ಸುಳಿವು ಸಿಕ್ಕಿದ್ದು, ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆ ಇದೆ. ಈ ಸಂಬಂಧ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಚಿಂತನೆ ನಡೆಸಿದ್ದು, ನಾಳೆ ಆಯೋಗದ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಯಲಿದೆ.
ಪರ್ಯಾಯ ಪರಿಹಾರಕ್ಕಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕೆಇಆರ್‌ಸಿ ಮೊರೆ ಹೋಗಿದೆ. ಕಳೆದ ಎರಡು ಆರ್ಥಿಕ ವರ್ಷಗಳಾದ 2024 ಮತ್ತು 2025ರಲ್ಲಿ ಒಟ್ಟು ಸುಮಾರು 2800 ಕೋಟಿ ರೂಪಾಯಿ ನಷ್ಟ ಅನುಭವಿಸಿರುವುದಾಗಿ ಬೆಸ್ಕಾಂ ತಿಳಿಸಿದೆ. ಈ ನಷ್ಟವನ್ನು ಸರಿದೂಗಿಸಲು ಮಧ್ಯಂತರ ವಿದ್ಯುತ್ ದರ ಏರಿಕೆ ಅಗತ್ಯವಿದೆ ಎಂಬ ವಾದವನ್ನು ಮುಂದಿರಿಸಿದೆ.
ಈ ಹಿಂದೆ ಮುಂದಿನ ಎರಡು ಆರ್ಥಿಕ ವರ್ಷಗಳಿಗೆ ದರ ನಿಗದಿ ಮಾಡಿದ್ದ ಕೆಇಆರ್‌ಸಿ, ಇದೀಗ ಮಧ್ಯಂತರ ದರ ಪರಿಷ್ಕರಣೆ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ. ಈ ನಿರ್ಧಾರ ಜಾರಿಗೆ ಬಂದರೆ ಗೃಹ ಬಳಕೆದಾರರು ಹಾಗೂ ಕೈಗಾರಿಕಾ ವಲಯಕ್ಕೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.
ಇದೀಗ ದರ ಏರಿಕೆ ವಿಚಾರವಾಗಿ ಗ್ರಾಹಕರು ಮತ್ತು ಉದ್ಯಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಾಳೆಯ ಸಭೆಯಲ್ಲಿ ಸಾರ್ವಜನಿಕರ ಆವಾಲು-ಸಲಹೆಗಳನ್ನು ಸ್ವೀಕರಿಸಲು ಕೆಇಆರ್‌ಸಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಸಭೆಯ ಬಳಿಕ ಅಂತಿಮ ನಿರ್ಧಾರ ಹೊರಬರುವ ನಿರೀಕ್ಷೆ ಇದೆ.