Saturday, October 24, 2026
HomeLocal Newsಒಂದೇ ದಿನ ಹತ್ತು ಜೀವಗಳಿಗೆ ಆಸರೆಯಾದ ರಕ್ತದಾನಿಗಳು!

ಒಂದೇ ದಿನ ಹತ್ತು ಜೀವಗಳಿಗೆ ಆಸರೆಯಾದ ರಕ್ತದಾನಿಗಳು!

ಕಾರವಾರ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಕ್ಕೆ ರಕ್ತದ ತುರ್ತು ಅಗತ್ಯ ಎದುರಾದಾಗ, ಸಮಯಕ್ಕೆ ಸರಿಯಾಗಿ ರಕ್ತ ಸಿಗುತ್ತದೆಯೇ ಎಂಬ ಆತಂಕ ಕಾಡುವುದು ಸಹಜ. ಅಂಥ ಸಂದರ್ಭದಲ್ಲಿ ಪರಿಚಯವೇ ಇಲ್ಲದವರ ನೆರವಿನ ಹಸ್ತ ಸಿಕ್ಕರೆ ಅದಕ್ಕಿಂತ ದೊಡ್ಡ ಸಮಾಧಾನ ಮತ್ತೊಂದಿಲ್ಲ. ಕಾರವಾರದಲ್ಲಿ ‘ಬ್ಲಡ್ ಡೋನರ್ಸ್ ಕಾರವಾರ’ ತಂಡದವರು ಒಂದೇ ದಿನ ಹತ್ತು ಮಂದಿ ರಕ್ತದಾನ ಮಾಡುವ ಮೂಲಕ ಇಂಥದ್ದೇ ಮಾನವೀಯ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ.

ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ವಿವಿಧ ಗುಂಪಿನ ರಕ್ತದ ತುರ್ತು ಅವಶ್ಯಕತೆ ಎದುರಾಗಿತ್ತು. ಈ ಸಂದರ್ಭದಲ್ಲಿ ರೋಗಿಗಳ ಕುಟುಂಬಸ್ಥರು ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ತುರ್ತು ಸಂದರ್ಭಗಳಲ್ಲಿ ರಕ್ತದಾನಿಗಳನ್ನು ಒದಗಿಸುತ್ತಿರುವ ‘ಬ್ಲಡ್ ಡೋನರ್ಸ್ ಕಾರವಾರ’ ತಂಡದ ಸಂಸ್ಥಾಪಕ ವಿನಾಯಕ ನಾಯ್ಕ ಚೆಂಡಿಯಾ ಅವರನ್ನು ಸಂಪರ್ಕಿಸಿ ನೆರವು ಕೋರಿದರು.

ರಕ್ತದ ಅಗತ್ಯದ ಮಾಹಿತಿ ಸಿಗುತ್ತಿದ್ದಂತೆಯೇ ವಿನಾಯಕ ನಾಯ್ಕ ಅವರು ತಮ್ಮ ತಂಡದ ವಾಟ್ಸ್‌ಆ್ಯಪ್ ಗುಂಪಿನಲ್ಲಿ ರಕ್ತದಾನಕ್ಕೆ ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ತಂಡದ ಸದಸ್ಯರು, ತಡಮಾಡದೆ ರಕ್ತದಾನ ಕೇಂದ್ರಕ್ಕೆ ತೆರಳಿ ತಮ್ಮ ರಕ್ತವನ್ನು ದಾನ ಮಾಡಿದರು.

ಗಣೇಶ ಎಸ್. ನಾಯ್ಕ, ಸುಹಾನ್ ಚೆಂಡೇಕರ, ಸುನಿಲ್ ಅಂಬಿಗ, ನಾಗರಾಜ ನಾರ್ವೇಕರ, ಪ್ರವೀಣ ಮ್ಹಾಳಸೇಕರ, ಪ್ರಶಾಂತ ಬಾಂದೇಕರ, ಸಂಜಯ್ ಮಾಜಾಳಿಕರ, ಜಗದೀಶ ಓಲೇಕರ, ಗುರು ಹೆಗಡೆ ಹಾಗೂ ಮನೋಜ ಡಿ. ನಾಯ್ಕ ಚೆಂಡಿಯಾ ಅವರು ರಕ್ತದಾನ ಮಾಡಿದ ಹತ್ತು ಬಾಂಧವರು. ಇವರ ನೆರವಿನಿಂದ ರೋಗಿಗಳಿಗೆ ಅಗತ್ಯವಿದ್ದ ವಿವಿಧ ಗುಂಪಿನ ರಕ್ತವನ್ನು ಒದಗಿಸಲು ಸಾಧ್ಯವಾಯಿತು.

ರಕ್ತವನ್ನು ಹಣ ಕೊಟ್ಟು ಖರೀದಿಸುವ ವಸ್ತುವಿನಂತೆ ನೋಡಲಾಗದು. ಅದನ್ನು ದಾನ ಮಾಡಲು ಮುಂದೆ ಬರುವ ವ್ಯಕ್ತಿಯ ಮಾನವೀಯ ಕಾಳಜಿಯೇ ಸಂಕಷ್ಟದಲ್ಲಿರುವ ಕುಟುಂಬಕ್ಕೆ ದೊಡ್ಡ ಆಸರೆಯಾಗುತ್ತದೆ.

ಈ ಕಾರ್ಯಕ್ಕೆ ಸಹಕರಿಸಿದ ಸುಭಾಷ್ ದುರ್ಗೇಕರ ಚಿತ್ತಾಕುಲ ಹಾಗೂ ಮಹಮ್ಮದ್ ರುಕ್ನೋದ್ದೀನ್ (ಸರ್ಫರಾಜ್) ಅವರಿಗೂ ವಿನಾಯಕ ನಾಯ್ಕ ಚೆಂಡಿಯಾ, ರೋಗಿಗಳ ಕುಟುಂಬಸ್ಥರು ಮತ್ತು ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share