Saturday, October 24, 2026
HomeLocal Newsಸಹಿಷ್ಣುತೆ ಸಮಾಜದ ಶಕ್ತಿಯಾಗಲಿ: ರಂಭಾಪುರಿ ಶ್ರೀ

ಸಹಿಷ್ಣುತೆ ಸಮಾಜದ ಶಕ್ತಿಯಾಗಲಿ: ರಂಭಾಪುರಿ ಶ್ರೀ

ಯಲ್ಲಾಪುರ: ಜಾತಿ, ಧರ್ಮ ಮತ್ತು ಪ್ರಾಂತಗಳ ಹೆಸರಿನಲ್ಲಿ ನಡೆಯುವ ಸಂಘರ್ಷಗಳಿಗೆ ಮನುಷ್ಯನ ಸಂಕುಚಿತ ಮನೋಭಾವವೇ ಕಾರಣ. ಪ್ರತಿಯೊಬ್ಬರೂ ಪರಸ್ಪರರ ಧರ್ಮವನ್ನು ಗೌರವಿಸುವ ಸಹಿಷ್ಣುತೆ ಬೆಳೆಸಿಕೊಂಡು, ಧರ್ಮದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಸಾಧ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕಲ್ಮಠದ ಶಿವಸಾನಿಧ್ಯ ಸಭಾಭವನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಧರ್ಮದ ಆದರ್ಶಗಳು ಮತ್ತು ಮೌಲ್ಯಗಳನ್ನು ಅರಿತುಕೊಂಡು ಆಚರಣೆಯಲ್ಲಿ ತರುವಲ್ಲಿ ಸಂಸ್ಕಾರ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಯುವಜನರಲ್ಲಿ ಧರ್ಮಪ್ರಜ್ಞೆ ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳ ಅರಿವು ಕುಂದುತ್ತಿರುವುದು ಕಳವಳಕಾರಿ.

ಇಂತಹ ಸಂದರ್ಭದಲ್ಲಿ ನಾಡಿನ ಧರ್ಮಪೀಠಗಳು ಯುವಜನರಿಗೆ ಸನ್ಮಾರ್ಗ ತೋರಿಸುವ ಮಾರ್ಗದರ್ಶಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಧರ್ಮವನ್ನು ಜಾತಿ ಅಥವಾ ಸಮುದಾಯದ ಗುರುತಾಗಿ ಮಾತ್ರ ನೋಡಬಾರದು. ಮಾನವೀಯತೆಯೇ ಧರ್ಮದ ನಿಜವಾದ ಸ್ವರೂಪ. ಸಂಪತ್ತು ಹೆಚ್ಚಿದ್ದರೂ ಬದುಕಿನಲ್ಲಿ ಶಾಂತಿ, ನೆಮ್ಮದಿ ಇಲ್ಲದಿದ್ದರೆ ಅದರಿಂದ ಪ್ರಯೋಜನವಿಲ್ಲ. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಧರ್ಮಮಾರ್ಗದಲ್ಲಿ ನಡೆದಾಗ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಶ್ರೀಗಳು ನುಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರು ಶ್ರೀಗಳಿಗೆ ಫಲ ಸಮರ್ಪಿಸಿದರು.

ಶಾಸಕ ಶಿವರಾಮ ಹೆಬ್ಬಾರ್, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಾಜಿ ಶಾಸಕ ವಿ.ಎಸ್. ಪಾಟೀಲ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ವಿಜಯ ಮಿರಾಶಿ ಸೇರಿದಂತೆ ಗಣ್ಯರಿಗೆ ಶ್ರೀಗಳ ದರ್ಶನಾಶೀರ್ವಾದ ಅನುಗ್ರಹಿಸಿದರು.

ಗಂಗಾಧರ ಹಿರೇಮಠ ಪ್ರಾರ್ಥಿಸಿದರು. ಶಿವದೇವ ದೇಸಾಯಸ್ವಾಮಿ ಸ್ವಾಗತಿಸಿದರು. ಸಂಗೊಳ್ಳಿಯ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ನಿರ್ವಹಿಸಿದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad

Most Popular

Recent Comments

error: Content is protected !!
Share