ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದ ಆರಾಧ್ಯ ದೈವವಾದ ಶ್ರೀ ದುರ್ಗಾಪರಮೇಶ್ವರಿ ಆದಿಶಕ್ತಿ ಕಿತ್ತೂರಮ್ಮ ಜಾತ್ರಾ ಮಹೋತ್ಸವವು ಸಕಲ ಪೂಜಾ ಕೈಂಕರ್ಯಗಳೊಂದಿಗೆ ಭಕ್ತಿಭಾವಪೂರ್ಣವಾಗಿ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಸಕಲ ಸಿದ್ಧತೆಗಳನ್ನು ಕಿತ್ತೂರಿನ 18 ಗ್ರಾಮಗಳ ಎಲ್ಲಾ ಕೋಮಿನ, ಎಲ್ಲಾ ಜನಾಂಗದವರು ಒಂದಾಗಿ ಸಹಕಾರ ಮನೋಭಾವದಿಂದ ವೈಭವಯುತವಾಗಿ ಆಚರಣೆ ಮಾಡಿದರು.
ಜಾತ್ರೆಯ ಹಿಂದಿನ ದಿನ ಉತ್ಸವ ಮೂರ್ತಿಯ ದೇವಿಯನ್ನು ಹತ್ತಿರದ ಪುಣ್ಯಕ್ಷೇತ್ರವಾದ ಚುಂಚನಕಟ್ಟೆ ಕಾವೇರಿ ಹೊಳೆಯಲ್ಲಿ ಮಡಿಮಾಡಿ, ಸಕಲ ಪೂಜಾ ವಿಧಾನಗಳು ಹಾಗೂ ಹೋಮ-ಹವನಗಳನ್ನು ನೆರವೇರಿಸಲಾಯಿತು.
ಬಳಿಕ ಮಾರ್ಗದುದ್ದಕ್ಕೂ ಬರುವ ಗ್ರಾಮಗಳಲ್ಲಿ ಭಕ್ತಾದಿಗಳು ಪೂಜೆ ಸಲ್ಲಿಸಿ, ಭಕ್ತರ ಮೆರವಣಿಗೆಯೊಂದಿಗೆ ಉತ್ಸವ ಮೂರ್ತಿಯನ್ನು ಕಿತ್ತೂರು ಗ್ರಾಮಕ್ಕೆ ತಂದು, ನಂತರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ಜಾತ್ರೋತ್ಸವದ ದಿನ ದೇವಾಲಯದಿಂದ ಮೆರವಣಿಗೆ ಮೂಲಕ ದೇವಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಿ ಭಕ್ತರು ಹರ್ಷೋದ್ಗಾರದಿಂದ ಉಘೇ ಅನ್ನಪೂರ್ಣೇಶ್ವರಿ, ಉಘೇ ಕಿತ್ತೂರಮ್ಮ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದು ಪುನೀತರಾದರು.
ಈ ವೇಳೆ ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ತಮ್ಮ ಹರಕೆಯನ್ನು ಸಮರ್ಪಿಸಿದರು.
ರಥೋತ್ಸವದ ಸಂದರ್ಭದಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಿತಿನ್ ವೆಂಕಟೇಶ್ ಮತ್ತು ಅಭಿಮಾನಿ ಬಳಗದ ವತಿಯಿಂದ ಭಕ್ತರಿಗೆ ಪ್ರಸಾದ ಹಾಗೂ ಮಜ್ಜಿಗೆ-ಪಾನಕವನ್ನು ವಿತರಣೆ ಮಾಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಟ್ಟದಪುರ ಪೊಲೀಸ್ ಠಾಣೆ ವತಿಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಸಲಾಗಿತ್ತು.