Ad
Ad
Ad
Home Local News ಯುವ ಜನಾಂಗದ ಚಿಂತನೆಗಳು ಮಾದರಿಯಾಗಲಿ

ಯುವ ಜನಾಂಗದ ಚಿಂತನೆಗಳು ಮಾದರಿಯಾಗಲಿ

0
62

ಕಾರವಾರ: ಯುವಕರು ಯಾವುದೇ ದೇಶದ ಶಕ್ತಿ, ಸಂಪತ್ತು ಮತ್ತು ಭವಿಷ್ಯ. ಭಾರತ ದೇಶದ ಜನ ಸಂಖ್ಯೆಯಲ್ಲಿ ಹೆಚ್ಚಿನ ಭಾಗ ಯುವಕರದ್ದೇ ಆಗಿದ್ದು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ವಿಕಸಿತ ಭಾರತ ನಿರ್ಮಾಣ ಮಾಡಲು ಯುವಕರ ಚಿಂತನೆಗಳು ಸಕಾರಾತ್ಮವಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.

ಅವರು ಗುರುವಾರ ಕಾರವಾರದ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಭಾರತ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತೀಯ ಕಚೇರಿ ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಮೈ ಭಾರತ ಕೇಂದ್ರ ಉತ್ತರ ಕನ್ನಡ ಹಾಗೂ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರ ಇವರ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಜಿಲ್ಲಾ ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಸಾಜಿದ ಮುಲ್ಲಾ ಮಾತನಾಡಿ, ವಿಕಸಿತ ಭಾರತದ ಪರಿಕಲ್ಪನೆ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಮಾತ್ರವಲ್ಲ, ಸಮಾನತೆ, ಸ್ವಚ್ಛತೆ, ಶಾಂತಿ, ವೈಜ್ಞಾನಿಕ ಮನೋಭಾವನೆ, ಅಜ್ಞಾನ ಮತ್ತು ಅನ್ಯಾಯಗಳ ಬಗ್ಗೆ ಯುವಕರು ಜಾಗ್ರತೆ ಮೂಡಿಸಬೇಕು. ಇಂದಿನ ಯುವಕರು ತಮ್ಮ ಸಾಮರ್ಥ್ಯವನ್ನು ಗುರುತಿಸಿಗೊಂಡು ದೇಶದ ಪ್ರಗತಿಗಾಗಿ ಶ್ರಮಿಸಿದರೆ ವಿಕಸಿತ ಭಾರತದ ಪರಿಕಲ್ಪನೆ ನನಸಾಗುತ್ತದೆ. ಯುವ ಜನಾಂಗದ ಚಿಂತನೆಗಳು ಸೃಜನಾತ್ಮಕವಾಗಿರಲಿ ಎಂದರು.

ಕಾರವಾರದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥ ಡಾ. ಶಿವಕುಮಾರ ಹರಗಿ ಮಾತನಾಡಿ, ವಿಕಾಸ ಮತ್ತು ವಿಕಸಿತ ರಾಷ್ಟ್ರವಾಗಲು ಯುವಕರು ನಾಯಕತ್ವ , ಸಾಮಾಜಿಕ ಜವಾಬ್ದಾರಿ ಹಾಗೂ ಸತ್ಯ ನಿಷ್ಠೆಯನ್ನು ಅಳವಡಿಸಿಕೊಂಡು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ನಾಯಕತ್ವದ ಗುಣಗಳು ಬೆಳೆದು ದೇಶವನ್ನು ಪ್ರತಿನಿಧಿಸುವ ಸಂಕಲ್ಪ ಈಡೇರಿಸಲು ಸಾಧ್ಯ ಎಂದರು.

ಮೈ ಭಾರತ ಕೇಂದ್ರ ಉತ್ತರ ಕನ್ನಡದ ಉಪ-ನಿರ್ದೇಶಕ ಲೋಕೇಶ ಕುಮಾರ, ವಿಕಸಿತ ಭಾರತ ಜಿಲ್ಲಾ ಯುವ ಸಂಸತ್ತಿನ ಕುರಿತಾದ ಉದ್ದೇಶಗಳು ಹಾಗೂ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿವಾಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಕೇ.ರಾಣೆ ಮಾತನಾಡಿ, ಯುವ ಸಂಸತ್ತು ಮುಂದಿನ ನಾಯಕರನ್ನು ನಿರ್ಮಾಣ ಮಾಡುವ ವೇದಿಕೆಯಾಗಿದೆ. ನಿವು ಮಾಡುವ ಚಿಂತನೆಗಳು ಮುಂದಿನ ವಿಕಸಿತ ಭಾರತದ ಪರಿಕಲ್ಪನೆಗೆ ಸಹಾಯಕವಾಗಲಿ ಎಂದರು.

ಪ್ರಾಚಾರ್ಯ ಡಾ. ಸುಮನ ಜಿ.ಸಾವಂತ ಸ್ವಾಗತಿಸಿದರು. ಡಾ ಮಾಧವಿ ಗಾಂವಕರ ಮತ್ತು ರೂಪಾ ಗಾಂವಕರ ನಿರೂಪಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ನವೀನ ದೇವರಭಾವಿ ವಂದಿಸಿದರು.

ಉತ್ತರ ಕನ್ನಡ ಜಿಲ್ಲೆಯಿಂದ ವಿಕಸಿತ ಭಾರತ ಯುವ ಸಂಸತ್ತಿನಲ್ಲಿ ಭಾಗವಹಿಸಿದ ವಿವಿಧ ಮಹಾವಿದ್ಯಾಲಯದ ಸ್ಫರ್ಧಾಳುಗಳಲ್ಲಿ ಪ್ರಾರ್ಥನಾ ಭಟ್ ಪ್ರಥಮ ಸ್ಥಾನ, ಪ್ರಸನ್ನ ಮರಾಠಿ ದ್ವಿತಿಯ ಸ್ಥಾನ ಕಾರ್ತಿಕ ಶಾನಭಾಗ ತೃತೀಯ, ಸಿಂಧು ಗಾಂವಕರ 4ನೇ ಹಾಗೂ ರಂಜಿತಾ ನಾಯಕ 5ನೇ ಸ್ಥಾನವನ್ನು ಪಡೆದರು. ನಿರ್ಣಾಯಕರಾಗಿ ಹೇಮಲತಾ ಕೆ, ಸುಮಯಾ ಸೈಯದ, ಡಾ. ರಾಜಕುಮಾರ ಪಾಟಿಲ್, ಲೋಕೇಶ ಕುಮಾರ, ಹೆಮಂತ ಎಚ್. ಭಟ್‌, ಸಂಪದಾ ಮತ್ತಿತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!