Ad
Ad
Ad
Home Your Voice ಅಳಿಸಲಾಗದ ಹಳೆಮನೆಯ ಸವಿನೆನಪುಗಳು

ಅಳಿಸಲಾಗದ ಹಳೆಮನೆಯ ಸವಿನೆನಪುಗಳು

0
44

ಮನುಷ್ಯನ ಜೀವನದಲ್ಲಿ ಕೆಲವು ನೆನಪುಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.ಅಂತಹ ನೆನಪುಗಳಲ್ಲಿ ಬಾಲ್ಯದ ಹಳೆಮನೆಯ ನೆನಪುಗಳು ಅತ್ಯಂತ ವಿಶೇಷವಾದವು. ಹಳೆಮನೆ ಕೇವಲ ಇಟ್ಟಿಗೆ, ಮಣ್ಣು,ಸಿಮೆಂಟ್ ಅಥವಾ ಮರದಿಂದ ನಿರ್ಮಿಸಿದ ಕಟ್ಟಡವಲ್ಲ. ಅದು ನಮ್ಮ ಬಾಲ್ಯದ ನಗು, ಆಟ, ಪ್ರೀತಿ, ಸಂಬಂಧ ಮತ್ತು ಸಂಸ್ಕೃತಿಯ ಜೀವಂತ ನೆಲೆ.

ಹಳೆಮನೆಯ ವಿಶಾಲವಾದ ಅಂಗಳ, ತುಳಸಿ ಕಟ್ಟೆ, ಮಣ್ಣಿನ ನೆಲ, ಮರದ ಬಾಗಿಲು, ಕೆಂಪು ಹೆಂಚಿನ ಮೇಲ್ಛಾವಣಿ, ಮನೆಯ ಸುತ್ತಲಿನ ಹಸಿರು ಮರಗಳು ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.

ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ, ಸಂಜೆ ಅಜ್ಜ-ಅಜ್ಜಿ ಹೇಳುತ್ತಿದ್ದ ಕಥೆಗಳು, ಮನೆಯ ಮುಂಭಾಗದಲ್ಲಿ ಹೊಳೆಯುತ್ತಿದ್ದ ಚಿಮಣಿ ದೀಪದ ಮಂದ ಬೆಳಕು, ಆ ಬೆಳಕಿನಲ್ಲಿ ಕುಟುಂಬದವರೆಲ್ಲ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದ ಕ್ಷಣಗಳು ಮನಸ್ಸಿಗೆ ಅಪಾರ ಸಂತೋಷವನ್ನು ನೀಡುತ್ತವೆ.

ವಿದ್ಯುತ್ ಇಲ್ಲದ ದಿನಗಳಲ್ಲಿಯೂ ಆ ಚಿಮಣಿ ದೀಪದ ಬೆಳಕು ಮನೆಯನ್ನಷ್ಟೇ ಅಲ್ಲ, ಮನಸ್ಸುಗಳನ್ನೂ ಬೆಳಗಿಸುತ್ತಿತ್ತು. ಹಬ್ಬಗಳ ಸಂಭ್ರಮವೇ ಹಳೆಮನೆಯ ಮತ್ತೊಂದು ವಿಶೇಷತೆ. ಯುಗಾದಿ, ದೀಪಾವಳಿ, ನಾಗರ ಪಂಚಮಿ, ಗಣೇಶ ಚತುರ್ಥಿ, ತುಳಸಿ ಪೂಜೆ ಅಥವಾ ಮನೆ ದೇವರ ಹಬ್ಬ ಯಾವ ಹಬ್ಬವೇ ಆಗಿರಲಿ ಮನೆಯ ಪ್ರತಿಯೊಬ್ಬ ಸದಸ್ಯನಿಗೂ ಒಂದೊಂದು ಜವಾಬ್ದಾರಿ ಇರುತ್ತಿತ್ತು.

ಮನೆಯ ಶುಚಿಗೊಳಿಸುವುದರಿಂದ ಹಿಡಿದು, ತೋರಣ ಕಟ್ಟುವುದು, ಸಿಹಿ ತಿನಿಸುಗಳನ್ನು ತಯಾರಿಸುವುದು, ದೇವರ ಅಲಂಕಾರ, ಪೂಜೆಯ ಸಿದ್ಧತೆ ಎಲ್ಲ ಕೆಲಸಗಳನ್ನೂ ಒಗ್ಗಟ್ಟಿನಿಂದ ಮಾಡುತ್ತಿದ್ದರು. ಆ ಒಗ್ಗಟ್ಟಿನಲ್ಲಿ ಪ್ರೀತಿ, ಸಹಕಾರ ಮತ್ತು ಕುಟುಂಬದ ಬಾಂಧವ್ಯ ಅಡಗಿರುತ್ತಿತ್ತು. ಹಬ್ಬದ ದಿನ ಎಲ್ಲರೂ ಬಾಳೆಎಲೆಯಲ್ಲಿ ನೆಲಕ್ಕೆಕೂತು ಊಟ ಮಾಡುತ್ತಿದ್ದ ಸಂಭ್ರಮ ಇಂದಿಗೂ ಮರೆಯಲಾಗದ ಸಂಗತಿಗಳು.

ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಮನೆಯ ಅಂಗಳದಲ್ಲಿ ಆಡಿದ ಆಟಗಳು, ಮಳೆ ಬಂದಾಗ ಮನೆಯ ಮುಂಭಾಗದಲ್ಲಿ ನಿಂತು ಮಳೆಯನ್ನು ಸಂಭ್ರಮಿಸಿದ ಕ್ಷಣಗಳು, ಬೇಸಿಗೆಯಲ್ಲಿ ಮಾವು, ಹಲಸು, ನೇರಳೆ ಹಣ್ಣುಗಳನ್ನು ಕಿತ್ತು ತಿಂದ ದಿನಗಳು ಜೀವನದ ಅಮೂಲ್ಯ ಸಂಪತ್ತಾಗಿವೆ.

ವರ್ಷಕ್ಕೆ ಸಾಕಾಗುವಷ್ಟು ಕಟ್ಟಿಗೆಯನ್ನು ಮನೆಯವರೆಲ್ಲ ಸೇರಿ ಕಾಡಿನಿಂದ ತಂದು ಕೂಡಿಡುವುದು, ಹಂಡೆ ಒಲೆಗೆ ಬೆಂಕಿ ಹಚ್ಚಿ ಕಾದ ನೀರಿನಲ್ಲಿ ಸ್ನಾನ ಮಾಡುವುದು, ಮನೆಯ ಸುತ್ತಲೇ ಸಿಗುವ ಹಣ್ಣು, ಕಾಯಿ, ಸೊಪ್ಪುಗಳಿಂದ ಅಡುಗೆ ಮಾಡುವುದು, ಶುದ್ಧ ಹಸುವಿನ ಹಾಲನ್ನು ಮನೆಯವರೇ ಕರೆದು ಬಳಸುವುದು ಇವೆಲ್ಲವೂ ಹಳೆಮನೆಯ ಬದುಕಿನ ಅವಿಭಾಜ್ಯ ಭಾಗವಾಗಿದ್ದವು.

ಆ ದಿನಗಳಲ್ಲಿ ಇದ್ದ ಆರೋಗ್ಯ,ನೆಮ್ಮದಿ ಮತ್ತು ಆತ್ಮೀಯತೆಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಳೆಮನೆ ಕಟ್ಟಿದ ದಿನಗಳ ನೆನಪುಗಳೂ ಅಷ್ಟೇ ಮಧುರ. ಮನೆಯ ಹಿರಿಯರು ತಮ್ಮ ಶ್ರಮ, ಬೆವರು ಮತ್ತು ಕನಸುಗಳನ್ನು ಸೇರಿಸಿ ಕಟ್ಟಿದ ಆ ಮನೆ ಕೇವಲ ಒಂದು ಕಟ್ಟಡವಾಗಿರಲಿಲ್ಲ, ಅದು ಇಡೀ ಕುಟುಂಬದ ಹೆಮ್ಮೆ, ಪರಿಶ್ರಮ ಮತ್ತು ಏಕತೆಯ ಪ್ರತೀಕವಾಗಿತ್ತು. ಮನೆಯ ಪ್ರತಿಯೊಂದು ಗೋಡೆಯೂ ಕುಟುಂಬದ ಶ್ರಮದ ಕಥೆಯನ್ನು ಹೇಳುತ್ತದೆ.

ಇಂದು ಆಧುನಿಕ ಮನೆಗಳು ಮತ್ತು ಹೊಸ ಸೌಲಭ್ಯಗಳು ಹೆಚ್ಚಾಗಿವೆ. ಆದರೆ ಹಳೆಮನೆಯ ಆತ್ಮೀಯತೆ, ಪ್ರೀತಿ, ನೆಮ್ಮದಿ ಮತ್ತು ಒಗ್ಗಟ್ಟಿನ ಬದುಕು ಅಪರೂಪವಾಗಿದೆ. ಇಂದಿನ ಮಕ್ಕಳು ವಿಶಾಲವಾದ ಅಂಗಳದಲ್ಲಿ ಆಟವಾಡುವ ಸಂತೋಷ, ಅಜ್ಜ ಅಜ್ಜಿಯರ ಕಥೆಗಳನ್ನು ಕೇಳುವ ಭಾಗ್ಯ, ಚಿಮಣಿ ದೀಪದ ಬೆಳಕಿನಲ್ಲಿ ಕುಳಿತು ಕುಟುಂಬದೊಂದಿಗೆ ಕಾಲ ಕಳೆಯುವ ಅನುಭವ, ಹಬ್ಬದ ಸಿದ್ಧತೆಯಲ್ಲಿ ಎಲ್ಲರೊಂದಿಗೆ ಕೈಜೋಡಿಸುವ ಸಂಭ್ರಮ, ಪ್ರಕೃತಿಯೊಂದಿಗೆ ಬೆರೆತು ಬದುಕುವ ಸೊಗಡನ್ನು ಬಹಳಷ್ಟು ಕಳೆದುಕೊಳ್ಳುತ್ತಿದ್ದಾರೆ.

ಕಾಲ ಬದಲಾದರೂ ಹಳೆಮನೆಯ ನೆನಪುಗಳು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅವು ನಮ್ಮ ಬೇರುಗಳನ್ನು, ನಮ್ಮ ಸಂಸ್ಕೃತಿಯನ್ನು, ಕುಟುಂಬದ ಮೌಲ್ಯಗಳನ್ನು ಮತ್ತು ಒಗ್ಗಟ್ಟಿನ ಬದುಕಿನ ಮಹತ್ವವನ್ನು ಸದಾ ನೆನಪಿಸುತ್ತವೆ. ಆದ್ದರಿಂದ ಹಳೆಮನೆಯ ಸವಿನೆನಪುಗಳು ಎಂದಿಗೂ ಅಳಿಸಲಾಗದ ಜೀವನದ ಅಮೂಲ್ಯ ನಿಧಿ.

– ಉಷಾ ಭಟ್.

ಎಂ.ಜಿ.ಎಂ ಕಾಲೇಜು, ಉಡುಪಿ.

Previous article‌ಕೆಂಪು ಅಡಕೆ; ಬಣ್ಣವೊಂದಿದ್ದರೆ ಸಾಕೇ?!
Next articleಪ್ರೇಮ ವೈಫಲ್ಯ?; ಯುವಕ ನೇಣಿಗೆ ಶರಣು
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!