ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಲೆಕ್ಕಾಚಾರ ಕೆಲಸ ಮಾಡುತ್ತಿದೆ?
ಯಲ್ಲಾಪುರ: ವಿಧಾನಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಬಾಕಿ ಇರುವಾಗಲೇ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಅದಾಗಲೇ ʻಹೈ-ವೋಲ್ಟೇಜ್ʼ ಕ್ಷೇತ್ರವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ರಾಜಕೀಯ ವಲಯದಲ್ಲಿ ಒಂದರ ಬೆನ್ನಿಗೆ ಒಂದರಂತೆ ಊಹಾಪೋಹಗಳು, ವದಂತಿಗಳು ರೆಕ್ಕೆ-ಪುಕ್ಕ ಬಿಚ್ಚಿ ಹಾರುತ್ತಿವೆ.
ಈಗ ಹೆಚ್ಚು ಚರ್ಚೆಯಾಗುತ್ತಿರುವುದು ಶಾಸಕ ಶಿವರಾಮ ಹೆಬ್ಬಾರ್ ಅವರ ಕಾಂಗ್ರೆಸ್ ಸೇರ್ಪಡೆಗಿಂತಲೂ, ಬಿಜೆಪಿಯ ಮಾಜಿ ಶಾಸಕ ವಿ.ಎಸ್. ಪಾಟೀಲ ಕಾಂಗ್ರೆಸ್ ತೊರೆದು ಪುನಃ ಬಿಜೆಪಿ ಸೇರದಂತೆ ಪಕ್ಷದ ಹಿರಿಯ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ವದಂತಿ! ಇದೇ ಬೆಳವಣಿಗೆ ಮುಂದಿನ ಚುನಾವಣೆಯ ಟಿಕೆಟ್ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಘಳಿಗೆ ಸೈರಿಸು!:
2023ರ ವಿಧಾನಸಭೆ ಚುನಾವಣೆಯಲ್ಲಿ ವಿ.ಎಸ್. ಪಾಟೀಲ ಯಲ್ಲಾಪುರ–ಮುಂಡಗೋಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ವಿರುದ್ಧ ಸೋಲು ಕಂಡಿದ್ದರು.
ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಾಗಿರುವ ವಿ.ಎಸ್. ಪಾಟೀಲ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಳಿಸಿದ್ದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ಶಿವರಾಮ ಹೆಬ್ಬಾರ್ ವಿರುದ್ಧ ಸ್ಪರ್ಧಿಸಿದರೂ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ.
ಆದರೆ, ಪದೇಪದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು, 2024ರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ವಿಪ್ ಇದ್ದರೂ ಮತದಾನ ಮಾಡದೇ ಪಕ್ಷದ ನಿರ್ದೇಶನ ಉಲ್ಲಂಘಿಸಿರುವುದು, ಬಿಜೆಪಿ ಶಾಸಕನಾಗಿದ್ದರೂ ಕಾಂಗ್ರೆಸ್ ನಾಯಕರೊಂದಿಗೆ ಸಾರ್ವಜನಿಕವಾಗಿ ನಿಕಟ ಸಂಪರ್ಕ ಹೊಂದಿರುವುದು ಇತ್ಯಾದಿ ಕಾರಣಗಳನ್ನು ನೀಡಿ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಉಚ್ಛಾಟಿಸಿತು.
ಪಾಟೀಲರಿಗೆ ಸಿಗದ ಗೌರವ:
ಅದಾದ ಬಳಿಕ ಕಾಂಗ್ರೆಸ್ನಲ್ಲಿ ನಿರೀಕ್ಷಿತ ಗೌರವ ಹಾಗೂ ರಾಜಕೀಯ ಭವಿಷ್ಯದ ಬಗ್ಗೆ ಅಸಮಾಧಾನಗೊಂಡಿದ್ದ ವಿ.ಎಸ್. ಪಾಟೀಲರು ಪುನಃ ಬಿಜೆಪಿ ಸೇರುವ ಚಿಂತನೆಯಲ್ಲಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಜಿಲ್ಲೆಯ ಇಬ್ಬರು ಪ್ರಭಾವಿ ಕಾಂಗ್ರೆಸ್ ನಾಯಕರು ಮಧ್ಯಪ್ರವೇಶಿಸಿ ಅವರನ್ನು ಪಕ್ಷದಲ್ಲೇ ಉಳಿಯುವಂತೆ ಮನವೊಲಿಸಿದ್ದಾರೆ ಎಂಬ ಊಹಾಪೋಹಗಳು ಹರಿದಾಡತೊಡಗಿದವು.
ವಿ.ಎಸ್. ಪಾಟೀಲರನ್ನು ಕಾಂಗ್ರೆಸ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಏಕೆ? ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ವಿಶ್ಲೇಷಣೆಯ ಪ್ರಕಾರ, ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಸ್ಥಳೀಯ ನಾಯಕರಿಗೇ ಸಿಗಬೇಕು ಎಂಬ ಅಭಿಪ್ರಾಯ ಈ ಇಬ್ಬರೂ ಪ್ರಭಾವಿ ನಾಯಕರಲ್ಲಿದೆ ಎನ್ನಲಾಗುತ್ತಿದ್ದು, ಈ ಕಾರಣದಿಂದಲೇ ವಿ.ಎಸ್. ಪಾಟೀಲ ಪಕ್ಷ ಬಿಡದಂತೆ ತಡೆಯುವ ಪ್ರಯತ್ನ ತೆರೆಮರೆಯಲ್ಲಿ ನಡೆದಿದೆ ಎಂಬ ಚರ್ಚೆ ನಡೆಯುತ್ತಿದೆ.
ಇದೇ ಸಮೀಕರಣ ಶಾಸಕ ಶಿವರಾಮ ಹೆಬ್ಬಾರ್ ಅವರ ಮುಂದಿನ ರಾಜಕೀಯ ನಡೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಕಾಂಗ್ರೆಸ್ ಟಿಕೆಟ್ ಮೇಲೆ ಭರವಸೆ ಇಟ್ಟಿರುವ ಹೆಬ್ಬಾರರಿಗೆ, ಪಕ್ಷದೊಳಗಿನ ಈ ಬೆಳವಣಿಗೆ ಅನುಕೂಲಕರವಾಗಿ ಕಾಣುತ್ತಿಲ್ಲ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಹಳಿಯಾಳ ಹಾಗೂ ಭಟ್ಕಳದ ಇಬ್ಬರೂ ಪ್ರಭಾವಿ ನಾಯಕರ ಪ್ರಭಾವವನ್ನು ಪರಿಗಣಿಸಿದರೆ, ಅವರ ಒಪ್ಪಿಗೆ ಇಲ್ಲದೆ ಅಭ್ಯರ್ಥಿ ಆಯ್ಕೆ ಮಾಡುವುದು ಸುಲಭವಲ್ಲ ಎಂಬ ಅಭಿಪ್ರಾಯವೂ ಇದೆ. ಹೀಗಾಗಿ, ವಿ.ಎಸ್. ಪಾಟೀಲ ಕಾಂಗ್ರೆಸ್ನಲ್ಲೇ ಮುಂದುವರಿದರೆ, ಯಲ್ಲಾಪುರ ಟಿಕೆಟ್ ಸ್ಪರ್ಧೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಗುರುತಿಸಿಕೊಂಡಿರುವ ಶಿವರಾಮ ಹೆಬ್ಬಾರರು ಪುನಃ ಬಿಜೆಪಿ ಸೇರುವಂತಿಲ್ಲ. ಪಕ್ಷದೊಳಗಿನ ಪ್ರಭಾವಿ ನಾಯಕರ ಅಭಿಪ್ರಾಯಕ್ಕೂ ಅಭ್ಯರ್ಥಿ ಆಯ್ಕೆಯಲ್ಲಿ ಮಹತ್ವ ಇರಬಹುದು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಆದರೆ, ರಾಜಕೀಯದಲ್ಲಿ ಅಪಾರ ಅನುಭವ, ತಮ್ಮದೇ ಆದ ಪ್ರಭಾವ ಹೊಂದಿರುವ ಶಿವರಾಮ ಹೆಬ್ಬಾರ್ ಸ್ವತಂತ್ರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿ ಗೆಲುವು ಸಾಧಿಸುವ ವರ್ಚಸ್ಸು ಹೊಂದಿದ್ದಾರೆ ಎಂಬುದು ಕ್ಷೇತ್ರದ ಅವರ ಅಭಿಮಾನಿಗಳ ಅಭಿಪ್ರಾಯ.
ಇತ್ತ ಬಿಜೆಪಿ ಪಾಳಯದಲ್ಲೂ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಹರಿಪ್ರಕಾಶ್ ಕೋಣೆಮನೆ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ನಡೆಸುತ್ತಿದ್ದು, ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಜೊತೆಗೇ ಎಲ್.ಟಿ. ಪಾಟೀಲ, ಬಾಲಕೃಷ್ಣ ನಾಯಕ, ಶಿವಲಿಂಗಯ್ಯ ಅಲ್ಲಯ್ಯನಮಠ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಅವರ ಹೆಸರೂ ಟಿಕೆಟ್ ರೇಸ್ನಲ್ಲಿ ಕೇಳಿಬರುತ್ತಿದೆ.
ಸದ್ಯದ ರಾಜಕೀಯ ಚಿತ್ರಣವನ್ನು ಗಮನಿಸಿದರೆ, ಯಲ್ಲಾಪುರದಲ್ಲಿ ಪ್ರಶ್ನೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್ ವಿ.ಎಸ್. ಪಾಟೀಲರನ್ನೇ ಮುಂದಿರಿಸುತ್ತದೆಯೇ ಅಥವಾ ಶಿವರಾಮ ಹೆಬ್ಬಾರ್ಗೆ ಅವಕಾಶ ನೀಡುತ್ತದೆಯೇ ಎಂಬುದರ ಸುತ್ತ ಸುತ್ತುತ್ತಿದೆ.
(ಈ ವಿಶ್ಲೇಷಣೆ ಜನಾಭಿಪ್ರಾಯವನ್ನಷ್ಟೇ ಆಧರಿಸಿದೆ. ಪಕ್ಷದ ನಡೆ-ನಿರ್ಧಾರಗಳು ಮುಂಬರುವ ದಿನಗಳಲ್ಲಿ ತಿಳಿದುಬರಬೇಕಿದೆ)