ಇತ್ತೀಚೆಗೆ ಕೊಡಗು ಜಿಲ್ಲೆಯ ಹೋಂಸ್ಟೇಯಲ್ಲಿ ನಡೆದ ದಾರುಣ ಘಟನೆ ನಮ್ಮೆಲ್ಲರ ಮನಸ್ಸನ್ನು ಬೆಚ್ಚಿಬೀಳಿಸಿದೆ. ಇದು ಕೇವಲ ಒಂದು ವ್ಯಕ್ತಿಯ ಮೇಲಿನ ಅಪರಾಧವಲ್ಲ, ಇದು ನಮ್ಮ ದೇಶದ ಆತಿಥ್ಯ ಸಂಸ್ಕೃತಿಗೆ ಬಿದ್ದ ಒಂದು ಕಳಂಕ.ನಾವು ಹೆಮ್ಮೆಯಿಂದ ಹೇಳಿಕೊಳ್ಳುವ “ಅತಿಥಿ ದೇವೋ ಭವಃ” ಎಂಬ ಮೌಲ್ಯ ಇಂದು ಪ್ರಶ್ನಾರ್ಥಕವಾಗಿ ನಿಂತಿದೆ.
ಪ್ರಕೃತಿಯ ಮಡಿಲಿನಲ್ಲಿ ನೆಮ್ಮದಿಯನ್ನು ಹುಡುಕಿಕೊಂಡು ಬರುವ ಅತಿಥಿಗಳು, ತಮ್ಮ ಜೀವ ಮತ್ತು ಮಾನದ ಸುರಕ್ಷತೆ ಬಗ್ಗೆ ಶಂಕಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ವಿಷಾದನೀಯ.ಈ ಘಟನೆಯನ್ನು ನಾನು, ಒಬ್ಬ ನೇಚರ್ ಸ್ಟೇ ಮಾಲೀಕರಾಗಿ, ತೀವ್ರವಾಗಿ ಖಂಡಿಸುತ್ತೇನೆ.
ಹೋಂಸ್ಟೇ ಅಥವಾ ನೇಚರ್ ಸ್ಟೇ ನಡೆಸುವುದು ಕೇವಲ ಕೊಠಡಿಗಳನ್ನು ಬಾಡಿಗೆಗೆ ನೀಡುವ ವ್ಯವಹಾರವಲ್ಲ. ಇದು ಒಂದು ದೊಡ್ಡ ಜವಾಬ್ದಾರಿ. ಒಬ್ಬ ಅತಿಥಿ ನಮ್ಮ ಸ್ಥಳಕ್ಕೆ ಬರುತ್ತಾನೆ ಎಂದರೆ, ಅವನು ತನ್ನ ಭದ್ರತೆಯನ್ನು ನಮ್ಮ ಕೈಯಲ್ಲಿ ಇಡುತ್ತಾನೆ. ಅವನು ನಮ್ಮ ಮೇಲೆ ನಂಬಿಕೆ ಇಟ್ಟು ಬರುತ್ತಾನೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ.
ಆದರೆ ಇತ್ತೀಚಿನ ದಿನಗಳಲ್ಲಿ ಒಂದು ಆತಂಕಕಾರಿ ಬೆಳವಣಿಗೆ ಕಂಡುಬರುತ್ತಿದೆ. ಬಹುತೇಕ ಹೋಂಸ್ಟೇಗಳಲ್ಲಿ ಮಾಲೀಕರು ಸ್ವತಃ ಹಾಜರಿರುವುದಿಲ್ಲ. ಅವರು ದೂರದಿಂದ ನಿರ್ವಹಣೆ ಮಾಡುತ್ತಾರೆ. ಸಂಪೂರ್ಣ ಜವಾಬ್ದಾರಿಯನ್ನು ಸಿಬ್ಬಂದಿಗಳ ಕೈಗೆ ಬಿಡುತ್ತಾರೆ. ಇದೇ ಮೊದಲ ದೊಡ್ಡ ತಪ್ಪು.
ಮಾಲೀಕರು ಇಲ್ಲದ ಹೋಂಸ್ಟೇ ಎಂದರೆ ಅತಿಥಿಗಳ ಮೇಲೆ ನೇರ ಗಮನವಿರದು. ಸಿಬ್ಬಂದಿಗಳ ಮೇಲೆ ನಿಯಂತ್ರಣ ಕಡಿಮೆ. ಹೋಂಸ್ಟೇ ಎಂದರೆ “ಹೋಮ್” + “ಸ್ಟೇ”. ಮಾಲೀಕರ ಉಪಸ್ಥಿತಿ ಇಲ್ಲದಿದ್ದರೆ ಅದು “ಹೋಂಸ್ಟೇ” ಆಗುವುದೇ ಹೇಗೆ? ಇನ್ನೊಂದು ಗಂಭೀರ ವಿಚಾರ ಎಂದರೆ ಸಿಬ್ಬಂದಿ ನೇಮಕಾತಿ. ಬಹುತೇಕ ಹೋಂಸ್ಟೇಗಳು ಏಜೆಂಟರ ಮೂಲಕ ಸಿಬ್ಬಂದಿಯನ್ನು ನೇಮಿಸುತ್ತಿವೆ. ಅವರ ಹಿಂದಿನ ಹಿನ್ನೆಲೆ ಪರಿಶೀಲನೆ ಮಾಡುತ್ತಿಲ್ಲ, ತರಬೇತಿ ನೀಡುವುದಿಲ್ಲ. ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿ.
ಸಿಬ್ಬಂದಿ ಎಂದರೆ ಕೇವಲ ಕೆಲಸಗಾರರಲ್ಲ, ಅವರು ಅತಿಥಿಗಳೊಂದಿಗೆ ನೇರವಾಗಿ ಸಂಪರ್ಕ ಹೊಂದುವವರು. ಅವರ ನಡೆ-ನುಡಿಗಳು, ಶಿಸ್ತಿನ ಅಭಾವ, ಅಥವಾ ಅಜಾಗರೂಕತೆ ಕೂಡ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಮಾಲೀಕರು ಸಿಬ್ಬಂದಿಯ ಮೇಲೆ ಸಂಪೂರ್ಣ ಅವಲಂಬಿತರಾಗಿರುವುದರಿಂದ ಯಾರು ಏನು ಮಾಡುತ್ತಿದ್ದಾರೆ ಎಂಬ ಅರಿವು ಕಡಿಮೆ, ಅತಿಥಿಗಳ ಜೊತೆಗಿನ ವ್ಯವಹಾರ ಗಮನದಲ್ಲಿರುವುದಿಲ್ಲ, ಭದ್ರತಾ ನಿಯಮಗಳು ಪಾಲನೆಯಾಗುತ್ತಿಲ್ಲ.
ಈ ಪರಿಸ್ಥಿತಿ ಹಲವೆಡೆ ಸಾಮಾನ್ಯವಾಗುತ್ತಿದೆ. ನಾವು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು ಇದು ಸರಿಯಾದ ಸಂದರ್ಭ. ಮಾಲೀಕರು ಸ್ವತಃ ಸ್ಥಳದಲ್ಲಿ ಹಾಜರಿರಬೇಕು. ಸಿಬ್ಬಂದಿಯ ಪೂರ್ಣ ಪರಿಶೀಲನೆ (verification) ಕಡ್ಡಾಯವಾಗಬೇಕು. ತರಬೇತಿ ಮತ್ತು ಶಿಸ್ತಿನ ವ್ಯವಸ್ಥೆ ಅಗತ್ಯ. ಅತಿಥಿಗಳ ಭದ್ರತೆ ಪ್ರಥಮ ಆದ್ಯತೆ ಆಗಬೇಕು. ಸಂಪರ್ಕ (communication) ಸದಾ ಲಭ್ಯವಾಗಬೇಕು. ಒಂದು ಘಟನೆ ಸಂಪೂರ್ಣ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ.
ಆದರೆ ನಾವು ಜವಾಬ್ದಾರಿಯಿಂದ ನಡೆದುಕೊಂಡರೆ, ನಂಬಿಕೆಯನ್ನು ಮತ್ತೆ ನಿರ್ಮಿಸಬಹುದು. ಪ್ರಕೃತಿಯ ಮಧ್ಯೆ ನೆಮ್ಮದಿ ಹುಡುಕಿಕೊಂಡು ಬರುವ ಅತಿಥಿಗೆ, ನಾವು ಕೊಡಬೇಕಾದದ್ದು ಕೇವಲ ಸೌಲಭ್ಯವಲ್ಲ, ಭದ್ರತೆ, ಗೌರವ ಮತ್ತು ನಂಬಿಕೆ. ಹೋಂಸ್ಟೇ ನಡೆಸುವುದು ಒಂದು ವ್ಯವಹಾರವಲ್ ಅದು ಒಂದು ವ್ರತ. ಅತಿಥಿ ನಮ್ಮ ಮನೆಗೆ ಬಂದಾಗ, ಅವನು ದೇವರಂತೆಯೇ. “ಅತಿಥಿ ದೇವೋ ಭವಃ” ಮಾತಿನಲ್ಲಿ ಮಾತ್ರ ಉಳಿಯಬಾರದು… ನಮ್ಮ ನಡೆ-ನುಡಿಯಲ್ಲಿಯೂ ಪ್ರತಿಬಿಂಬಿಸಬೇಕು.
– ನಿರಂಜನ ಗಿರೀಶ ಭಟ್ಟ.
ಯುಕೆ ನೇಚರ್ ಸ್ಟೇ, ಯಲ್ಲಾಪುರ. ಉತ್ತರ ಕನ್ನಡ.