Friday, October 23, 2026
HomeLocal Newsಪ್ರವಾಸೋದ್ಯಮಕ್ಕೆ ಬೀಗ: ತಾಣಗಳನ್ನು ಮುಕ್ತವಾಗಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಪ್ರವಾಸೋದ್ಯಮಕ್ಕೆ ಬೀಗ: ತಾಣಗಳನ್ನು ಮುಕ್ತವಾಗಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಯಲ್ಲಾಪುರ: ತಾಲೂಕಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿರುವ ಕ್ರಮವನ್ನು ತೆರವುಗೊಳಿಸಿ, ಎಲ್ಲ ತಾಣಗಳನ್ನು ಮುಕ್ತಗೊಳಿಸಬೇಕು. ಒಂದು ವಾರದೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದರಿಂದ ಪ್ರವಾಸೋದ್ಯಮ ವ್ಯವಸ್ಥೆಯೇ ಹಾಳಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಹಲವು ಜಲಪಾತಗಳು, ದೇವಸ್ಥಾನಗಳು ಹಾಗೂ ನೈಸರ್ಗಿಕ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅದರಲ್ಲೂ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಮಳೆಗಾಲ ಸೂಕ್ತ ಸಮಯ. ಆದರೆ ಇದೇ ಸಂದರ್ಭದಲ್ಲಿ ಅಪಾಯದ ನೆಪವೊಡ್ಡಿ 3-4 ತಿಂಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿರುವುದು ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಕೃಷಿ ಉತ್ಪನ್ನಗಳ ಹೊರತಾಗಿ ತಾಲೂಕಿನ ಹಲವರ ಬದುಕಿಗೆ ಪ್ರಮುಖ ಆಸರೆಯಾಗಿರುವುದು ಪ್ರವಾಸೋದ್ಯಮ. ಆದರೆ ಪ್ರವಾಸಿ ತಾಣಗಳ ನಿರ್ಬಂಧದಿಂದ ತಾಲೂಕಿನ ಆರ್ಥಿಕ ವ್ಯವಹಾರದಲ್ಲಿ ಶೇ.40ರಷ್ಟು ನಷ್ಟ ಅನುಭವಿಸುವಂತಾಗಿದೆ ಎಂದು ಗಣೇಶ ಹೆಗಡೆ ವಿವರಿಸಿದರು.

ಬಿಜೆಪಿ ಮುಖಂಡ ಬಾಲಕೃಷ್ಣ ನಾಯಕ ಮಾತನಾಡಿ, ತಾಲೂಕಿನ ಹಲವು ಹೋಟೆಲ್‌ಗಳು, ಲಾಡ್ಜ್‌ಗಳು ಹಾಗೂ ಗ್ರಾಮೀಣ ಪ್ರದೇಶಗಳ ಸಣ್ಣಪುಟ್ಟ ಅಂಗಡಿಗಳು ಪ್ರವಾಸೋದ್ಯಮವನ್ನೇ ಅವಲಂಬಿಸಿ ಕಾರ್ಯನಿರ್ವಹಿಸುತ್ತಿವೆ. ಮಳೆಯಿಂದ ಪ್ರವಾಸಿಗರಿಗೆ ಅಪಾಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು, ಪ್ರವಾಸಿಗರ ಪ್ರವೇಶವನ್ನೇ ನಿರ್ಬಂಧಿಸುವುದು ಸರಿಯಲ್ಲ ಎಂದರು.

ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧಿಸಿರುವ ಅಧಿಕಾರಿಗಳ ಕ್ರಮದಿಂದ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಎಲ್ಲರೂ ನಷ್ಟ ಅನುಭವಿಸುವಂತಾಗಿದೆ ಎಂದು ಬಾಲಕೃಷ್ಣ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಂಡಳ ಉಪಾಧ್ಯಕ್ಷ ನಾಗರಾಜ ಕವಡಿಕೆರೆ ಮಾತನಾಡಿ, ಜಿಲ್ಲೆಯ ಜನರ ಸಹನೆಯನ್ನು ದೌರ್ಬಲ್ಯವೆಂದು ಕಾಂಗ್ರೆಸ್ ಸರ್ಕಾರ ಭಾವಿಸಿದೆ ಎಂದು ಆರೋಪಿಸಿದರು. ಸರ್ಕಾರದ ಕೆಲವು ಆದೇಶಗಳಿಂದ ಜನಸಾಮಾನ್ಯರಿಗೆ ಪದೇಪದೇ ತೊಂದರೆಯಾಗುತ್ತಿದೆ ಎಂದು ಹೇಳಿದ ಅವರು, ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಪ್ರಮುಖರಾದ ಶ್ರೀನಿವಾಸ ಗಾಂವ್ಕರ ಹಾಗೂ ಮಾಲತೇಶ ಜಲಧಿ ಉಪಸ್ಥಿತರಿದ್ದರು.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

Recent Comments

error: Content is protected !!
Share