ಧಾವಂತದ ಬದುಕಿನಲ್ಲಿ ನಿಮ್ಮ ಆರೋಗ್ಯದ ಕಾಳಜಿ ಮರೆಯದಿರಿ
ಒಂದು ಕ್ಷಣ ಯೋಚಿಸಿ ನೋಡಿ… ಕೇವಲ ಏಳು ದಿನದಲ್ಲಿ ಬೆಳೆದು, ಮಾರುಕಟ್ಟೆಯಲ್ಲಿ ಸಿಗುವ ದೊಡ್ಡ ದೊಡ್ಡ ಸೊಪ್ಪುಗಳಿಗಿಂತಲೂ ಹಲವು ಪಟ್ಟು ಹೆಚ್ಚು ಪೋಷಕಾಂಶಗಳನ್ನು ಕೊಡುವ ಆಹಾರವೊಂದು ನಿಮ್ಮ ಮನೆಯಲ್ಲೇ ಬೆಳೆಯಬಹುದಾದರೆ? ದುಬಾರಿ ಗೊಬ್ಬರ ಬೇಡ, ದೊಡ್ಡ ತೋಟ ಬೇಡ, ಕೃಷಿ ಅನುಭವವೂ ಬೇಡ. ಒಂದು ಚಿಕ್ಕ ಟ್ರೇ, ಸ್ವಲ್ಪ ಮಣ್ಣು, ಕೆಲವು ಬೀಜಗಳು ಇದ್ದರೆ ಸಾಕು. ಇವೇ ಇತ್ತೀಚೆಗೆ ಆರೋಗ್ಯ ಪ್ರಿಯರ ಮನಗೆದ್ದಿರುವ ಮೈಕ್ರೋ ಗ್ರೀನ್ಸ್.
ಮೈಕ್ರೋ ಗ್ರೀನ್ಸ್ ಎಂದರೆ ನಾವು ಬಳಸುವ ಧಾನ್ಯ, ಬೇಳೆ ಅಥವಾ ತರಕಾರಿ ಬೀಜಗಳು ಮೊಳಕೆಯೊಡೆದು ಮೊದಲ ಚಿಗುರೆಲೆಗಳನ್ನು ಬಿಟ್ಟಾಗ ಕೊಯ್ಲು ಮಾಡುವ ಎಳೆಯ ಸಸಿಗಳು. ಗಾತ್ರದಲ್ಲಿ ಪುಟ್ಟದಾಗಿದ್ದರೂ ಪೋಷಕಾಂಶದಲ್ಲಿ ಇವು ನಿಜಕ್ಕೂ ದೈತ್ಯರು. ಇವುಗಳನ್ನು ಬೇಯಿಸುವ ಅಗತ್ಯವೇ ಇಲ್ಲ. ಸಲಾಡ್, ಸ್ಯಾಂಡ್‌ವಿಚ್, ಸೂಪ್, ಚಪಾತಿ ರೋಲ್, ದೋಸೆ ಅಥವಾ ಉಪ್ಮಾದ ಮೇಲೂ ಉದುರಿಸಿ ತಿನ್ನಬಹುದು. ಆಹಾರದ ರುಚಿ ಮಾತ್ರವಲ್ಲ, ಅದರ ಪೌಷ್ಟಿಕ ಮೌಲ್ಯವೂ ಹೆಚ್ಚುತ್ತದೆ.
ಮೈಕ್ರೋ ಗ್ರೀನ್ಸ್ ಬೆಳೆಸಲು ಯಾವುದೇ ದೊಡ್ಡ ಜಮೀನು, ತೋಟ ಅಥವಾ ಅಪಾರ ಅನುಭವದ ಅಗತ್ಯವಿಲ್ಲ. ನಮ್ಮ ಮನೆಯ ಬಾಲ್ಕನಿ, ಕಿಟಕಿಯ ಪಕ್ಕ ಅಥವಾ ಅಡುಗೆಮನೆಯ ಸಣ್ಣ ಜಾಗದಲ್ಲೇ ಇವುಗಳನ್ನು ಅತ್ಯಂತ ಸುಲಭವಾಗಿ ಬೆಳೆಸಬಹುದು.
ಧಾನ್ಯಗಳು ಮತ್ತು ಕಾಳುಗಳ ವಿಭಾಗದಲ್ಲಿ ಮೆಂತ್ಯ, ಹೆಸರುಕಾಳು, ಕಡಲೆಕಾಯಿ, ಎಳ್ಳು, ಮತ್ತು ಸಾಸಿವೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಮೆಂತ್ಯದ ಮೈಕ್ರೋ ಗ್ರೀನ್ಸ್ ಕೊಂಚ ಕಹಿ ರುಚಿಯನ್ನು ಹೊಂದಿದ್ದರೂ ಜೀರ್ಣಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಅತ್ಯುತ್ತಮ. ಹೆಸರುಕಾಳು ಮತ್ತು ಕಡಲೆ ಸಿಹಿ ರುಚಿಯನ್ನು ನೀಡುತ್ತವೆ ಮತ್ತು ಇವುಗಳಲ್ಲಿ ಪ್ರೋಟೀನ್ ಪ್ರಮಾಣ ಅತ್ಯಧಿಕವಾಗಿರುತ್ತದೆ. ಸಾಸಿವೆ ಮೈಕ್ರೋ ಗ್ರೀನ್ಸ್ ಕೊಂಚ ಖಾರ ಮತ್ತು ತೀಕ್ಷ್ಣವಾದ ರುಚಿಯನ್ನು ಹೊಂದಿದ್ದು, ಸಾಲಡ್ ಮತ್ತು ಚಾಟ್‌ಗಳ ರುಚಿಯನ್ನು ಹೆಚ್ಚಿಸಲು ಸೂಕ್ತವಾಗಿವೆ.
ತರಕಾರಿ ಮತ್ತು ಸೊಪ್ಪುಗಳ ಬೀಜಗಳ ವಿಭಾಗದಲ್ಲಿ ಮೂಲಂಗಿ, ಪಾಲಕ್, ಸಬ್ಬಸಿಗೆ, ಕೊತ್ತಂಬರಿ, ಸೋಂಪು, ಸೂರ್ಯಕಾಂತಿ ಮತ್ತು ಬೀಟ್ರೂಟ್ ಬೀಜಗಳನ್ನು ಬಳಸಬಹುದು. ಮೂಲಂಗಿಯ ಮೈಕ್ರೋ ಗ್ರೀನ್ಸ್ ಕೊಂಚ ಖಾರವಾದ ವಿಶಿಷ್ಟ ರುಚಿಯನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಬೀಟ್ರೂಟ್‌ನ ಮೈಕ್ರೋ ಗ್ರೀನ್ಸ್ ಆಹಾರದ ಅಲಂಕಾರಕ್ಕೆ ಮತ್ತು ರಕ್ತವರ್ಧನೆಗೆ ಅತ್ಯಂತ ಸೂಕ್ತ. ಸೂರ್ಯಕಾಂತಿಯ ಮೈಕ್ರೋ ಗ್ರೀನ್ಸ್ ದಪ್ಪನೆಯ ಎಲೆಗಳನ್ನು ಹೊಂದಿದ್ದು, ಸಿಹಿ ರುಚಿಯನ್ನು ನೀಡುತ್ತದೆ.
ಮನೆಯಲ್ಲಿರುವ ಗೆರಟೆ, ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲೇ ಬೆಳೆಸಬಹುದು. ತಳದಲ್ಲಿ ನೀರು ಹೊರಹೋಗಲು ಸಣ್ಣ ರಂಧ್ರಗಳಿರಬೇಕು. ಸ್ವಲ್ಪ ತೆಂಗಿನ ನಾರಿನ ಹುಡಿ ಅಥವಾ ಫಲವತ್ತಾದ ಮಣ್ಣನ್ನು ತುಂಬಿಸಿ ಸಮವಾಗಿ ಹರಡಬೇಕು. ನಂತರ ನಮಗೆ ಬೇಕಾದ ಬೀಜಗಳನ್ನು ಮಣ್ಣಿನ ಮೇಲೆ ದಟ್ಟವಾಗಿ ಎರಚಬೇಕು. ಬೀಜಗಳನ್ನು ಒಂದರ ಮೇಲೊಂದು ಬೀಳದಂತೆ ಸಮವಾಗಿ ಹರಡಿ, ಅದರ ಮೇಲೆ ತೆಳುವಾಗಿ ಮಣ್ಣಿನ ಅಥವಾ ಕೊಕೊಪೀಟ್‌ನ ಮತ್ತೊಂದು ಪದರವನ್ನು ಮುಚ್ಚಬೇಕು.
ಬೀಜ ಬಿತ್ತಿದ ನಂತರ ಸ್ಪ್ರೇ ಬಾಟಲ್ ಬಳಸಿ ಹಗುರವಾಗಿ ನೀರನ್ನು ಸಿಂಪಡಿಸಬೇಕು. ಮಣ್ಣಿನಲ್ಲಿ ತೇವಾಂಶವಿರಬೇಕು, ಆದರೆ ನೀರು ನಿಲ್ಲಬಾರದು. ಟ್ರೇಯನ್ನು ನೇರ ಬಿಸಿಲಿಲ್ಲದ, ಆದರೆ ಬೆಳಕು ಮತ್ತು ಗಾಳಿ ಚೆನ್ನಾಗಿ ಆಡುವ ಜಾಗದಲ್ಲಿ ಇಡಬೇಕು. ಇರುವೆಗಳು, ಚಿಕ್ಕಪುಟ್ಟ ಕೀಟ, ಪ್ರಾಣಿಗಳಿಗೆ ಎಟುಕದಂತೆ ಇಡುವುದು ಸೂಕ್ತ. ಎರಡರಿಂದ ಮೂರು ದಿನಗಳಲ್ಲಿ ಬೀಜಗಳು ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಪ್ರತಿದಿನ ಸ್ವಲ್ಪ ಸ್ವಲ್ಪ ನೀರು ಸಿಂಪಡಿಸುತ್ತಿದ್ದರೆ, ಏಳರಿಂದ ಹದಿನೈದು ದಿನಗಳಲ್ಲಿ ಸಸಿಗಳು ಎರಡರಿಂದ ಮೂರು ಇಂಚು ಎತ್ತರಕ್ಕೆ ಬೆಳೆದು, ಸುಂದರವಾದ ಚಿಗುರೆಲೆಗಳನ್ನು ಬಿಡುತ್ತವೆ.
ಸಸಿಗಳು ಸರಿಯಾದ ಎತ್ತರಕ್ಕೆ ಬೆಳೆದಾಗ, ಮಣ್ಣಿನ ಮಟ್ಟಕ್ಕಿಂತ ಕೊಂಚ ಮೇಲೆ ಕತ್ತರಿಯಿಂದ ಅವುಗಳನ್ನು ಕತ್ತರಿಸಿ ಕೊಯಿಲು ಮಾಡಿಕೊಳ್ಳಬಹುದು. ಕತ್ತರಿಸಿದ ಸಸಿಗಳನ್ನು ತಂಪಾದ ನೀರಿನಲ್ಲಿ ತೊಳೆದು ತಕ್ಷಣವೇ ಆಹಾರದಲ್ಲಿ ಬಳಸಬಹುದು.