Thursday, July 23, 2026
Join WhatsApp Group
HomeStateಸೌಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಸೌಜನ್ಯ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ನವದೆಹಲಿ/ಧರ್ಮಸ್ಥಳ: 14 ವರ್ಷಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಮಹತ್ವದ ತಿರುವು ಸಿಕ್ಕಿದೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ತಾತ್ವಿಕ ಸಮ್ಮತಿ ಸೂಚಿಸಿದ್ದು, ಮರುತನಿಖೆಯನ್ನು ಯಾವ ಸಂಸ್ಥೆ ನಡೆಸಬೇಕು ಎಂಬ ಕುರಿತು ತೀರ್ಪನ್ನು ಕಾಯ್ದಿರಿಸಿದೆ.

ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, ವಿಚಾರಣೆ ವೇಳೆ ಸಿಬಿಐ ತನಿಖೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ʻತನಿಖಾಧಿಕಾರಿ ಘಟನಾ ಸ್ಥಳಕ್ಕೆ ಯಾಕೆ ಹೋಗಿಲ್ಲ? 14 ವರ್ಷಗಳಾದರೂ ಸರಿಯಾದ ತನಿಖೆಯಾಗಿಲ್ಲ. ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. ಆದೇಶದ ಬಳಿಕ ಮಧ್ಯಂತರ ವರದಿ ಕೇಳುತ್ತೇವೆ. ಎಸ್‌ಐಟಿ ರಚನೆ ಬಗ್ಗೆ ನಾವು ನಿರ್ಧಾರ ಕೈಗೊಳ್ಳುತ್ತೇವೆʼ ಎಂದು ನ್ಯಾಯಪೀಠ ಹೇಳಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರ ಪ್ರಕರಣದ ಮರುತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸಂಪೂರ್ಣ ಸಿದ್ಧವಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಮತ್ತೊಂದೆಡೆ, ಸೌಜನ್ಯ ಅವರ ತಾಯಿ ಕುಸುಮಾವತಿ, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇರ ಉಸ್ತುವಾರಿಯಲ್ಲೇ ತನಿಖೆ ನಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಮರುತನಿಖೆಯನ್ನು ಯಾವ ಏಜೆನ್ಸಿ ನಡೆಸಬೇಕು ಹಾಗೂ ಅದರ ರೂಪುರೇಷೆ ಹೇಗಿರಬೇಕು ಎಂಬ ಕುರಿತು ಎರಡೂ ಪಕ್ಷಗಳ ವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್, ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿದೆ. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ಸೂಚಿಸಿರುವ ನ್ಯಾಯಾಲಯ, ಮುಂದಿನ ಆದೇಶದ ಬಳಿಕ ಮಧ್ಯಂತರ ವರದಿಯನ್ನೂ ಕೇಳುವುದಾಗಿ ಸ್ಪಷ್ಟಪಡಿಸಿದೆ.

ಸೌಜನ್ಯ ಪ್ರಕರಣದ ಸತ್ಯ ಹೊರಬರಬೇಕೆಂಬ ನಿರೀಕ್ಷೆಯ ನಡುವೆ, ಸುಪ್ರೀಂ ಕೋರ್ಟ್‌ನ ಈ ಬೆಳವಣಿಗೆ ಪ್ರಕರಣಕ್ಕೆ ಹೊಸ ದಿಕ್ಕು ನೀಡುವ ಸಾಧ್ಯತೆಯನ್ನು ಮೂಡಿಸಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share