ದುರಂತ ಕಂಡ ಡೋಮಗೇರಿಯಲ್ಲಿ ಹೊಸ ಅಂಗನವಾಡಿ ಆರಂಭ
ಯಲ್ಲಾಪುರ: ಕಳೆದ ವರ್ಷ ಡೋಮಗೇರಿ ಗೌಳಿವಾಡ ಕ್ರಾಸ್ನಲ್ಲಿ ನಡೆದ ಹೃದಯವಿದ್ರಾವಕ ದುರಂತದ ಬಳಿಕ ನೀಡಿದ್ದ ಭರವಸೆಯನ್ನು ಶಾಸಕ ಶಿವರಾಮ ಹೆಬ್ಬಾರ್ ಇದೀಗ ಕಾರ್ಯರೂಪಕ್ಕೆ ತಂದಿದ್ದಾರೆ. ಡೋಮಗೇರಿ ಗೌಳಿವಾಡದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸುವ ಮೂಲಕ ಗ್ರಾಮಸ್ಥರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.
ಕಳೆದ ವರ್ಷ ಅಂಗನವಾಡಿಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಹಿಳೆ ಹಾಗೂ ಮಕ್ಕಳ ಮೇಲೆ ಮರ ಬಿದ್ದು ಮೃತಪಟ್ಟ ಮನಕಲಕುವ ಘಟನೆ ನಡೆದಿತ್ತು.
ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಶಿವರಾಮ ಹೆಬ್ಬಾರ್, ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜೊತೆಗೆ, ಡೋಮಗೇರಿ ಗೌಳಿವಾಡದಲ್ಲೇ ಹೊಸ ಅಂಗನವಾಡಿ ಕೇಂದ್ರ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು.
ಆ ಭರವಸೆಯಂತೆ ಇದೀಗ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಮಕ್ಕಳಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಅಂಗನವಾಡಿ ಉದ್ಘಾಟನೆಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜಯ ಮಿರಾಶಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ತಾಲೂಕು ಅಧ್ಯಕ್ಷ ಮಾಕು ಕೊಕರೆ, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು, ಧನಗರ-ಗೌಳಿ ಸಮುದಾಯದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.