Friday, July 24, 2026
Join WhatsApp Group
HomeLocal Newsಜನವಸತಿಯ ಮಧ್ಯೆ ‌ಮೊಬೈಲ್ ಟವರ್ ನಿರ್ಮಾಣಕ್ಕೆ ವಿರೋಧ

ಜನವಸತಿಯ ಮಧ್ಯೆ ‌ಮೊಬೈಲ್ ಟವರ್ ನಿರ್ಮಾಣಕ್ಕೆ ವಿರೋಧ

ಪಂಚಾಯತ್‌ ಅನುಮತಿಯಿಲ್ಲದಿದ್ದರೂ ನಿರ್ಮಾಣವಾಗುತ್ತಿದೆ ಮೊಬೈಲ್‌ ಟವರ್

ಯಲ್ಲಾಪುರ: ಮಂಚಿಕೇರಿಯ ಕಂಪ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೀರಾ ಜನವಸತಿ ಇರುವ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಾಗಿರುವ ಕ್ರಮಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಜನರ ದೂರನ್ನು ಲೆಕ್ಕಿಸದೇ ಕಾಮಗಾರಿಗೆ ಮುಂದಾಗುತ್ತಿರುವುದಾಗಿ ಆರೋಪಿಸಿದ್ದಾರೆ.

ಈ ಸಂಬಂಧ ಪಂಚಾಯತ್ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲವೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಚಿಕೇರಿ-ಕಂಪ್ಲಿ ಪಂಚಾಯತ್ ವ್ಯಾಪ್ತಿಯ ಫಕೀರಪ್ಪ ಬೋವಿವಡ್ಡರ್, ವಿ.ಎಸ್. ನಾಯ್ಕ, ಎಂ.ಎಸ್. ನಾಯ್ಕ್, ನಾಗರಾಜ ಬೋವಿವಡ್ಡರ್, ಸಂತೋಷ ಆಚಾರಿ ಸೇರಿದಂತೆ ನೂರಾರು ಜನರು ಈಗಾಗಲೇ ಎರಡು ಬಾರಿ ಲಿಖಿತ ಮನವಿ ಸಲ್ಲಿಸಿದ್ದಾರೆ.

‘ಗಾಂವಠಾಣದಲ್ಲಿ ಟವರ್ ಬೇಡ’
ಜನವಸತಿ ಗಾಂವಠಾಣ ಪ್ರದೇಶದಲ್ಲಿ ಟವರ್ ನಿರ್ಮಾಣ ಮಾಡಿದರೆ ವಿಕಿರಣ (Radiation) ಪರಿಣಾಮದಿಂದ ಆರೋಗ್ಯ ಹಾನಿಯಾಗುವ ಭೀತಿ ಇದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಆದ್ದರಿಂದ ಟವರ್ ನಿರ್ಮಾಣವನ್ನು ತಕ್ಷಣವೇ ನಿಲ್ಲಿಸಬೇಕು ಎಂಬುದು ಅವರ ಒತ್ತಾಯವಾಗಿದೆ.

ಈಗ ನಿರ್ಮಿಸಲಾಗುತ್ತಿರುವ ಟವರ್‌ನಿಂದ ಕೇವಲ 50 ಮೀಟರ್ ಅಂತರದಲ್ಲೇ ಸಣ್ಣ ಮಕ್ಕಳ ಅಂಗನವಾಡಿ ಶಾಲೆ ಇದೆ. ಮತ್ತೊಂದು ದಿಕ್ಕಿನಲ್ಲಿ ಸುಮಾರು 50 ಮೀಟರ್ ಅಂತರದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವೂ ಇದೆ. ಟವರ್‌ನ ಒಂದು ಬದಿಯಲ್ಲಿ ಸಾರ್ವಜನಿಕ ರಸ್ತೆ ಇದ್ದು, ಉಳಿದ ಮೂರು ಬದಿಗಳಲ್ಲಿ ದಟ್ಟ ಜನವಸತಿ ಮನೆಗಳಿವೆ.

ಇಂತಹ ಪರಿಸ್ಥಿತಿಯಲ್ಲಿ ಟವರ್ ನಿರ್ಮಾಣ ಮಾಡಿದರೆ ಮಕ್ಕಳ ಆರೋಗ್ಯ, ಸಾರ್ವಜನಿಕರ ದಿನನಿತ್ಯ ಜೀವನದ ಮೇಲೆ ಪರಿಣಾಮ ಬೀರುವ ಭೀತಿ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪಂಚಾಯತ್ ಅನುಮತಿ ಇಲ್ಲವೇ?
ಸಾರ್ವಜನಿಕರ ಪ್ರಕಾರ, ಗಾಂವಠಾಣ ಸರ್ವೇ ನಂ. 17/3ರಲ್ಲಿ ಟವರ್ ನಿರ್ಮಾಣಕ್ಕೆ ವಿರೋಧಿಸಿ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಪಂಚಾಯತ್ ಕೂಡ ಯಾವುದೇ ಅನುಮತಿ ನೀಡಿಲ್ಲವೆಂದು ತಿಳಿಸಿದೆ. ಆದರೂ ಕಾಮಗಾರಿಯನ್ನು ಮುಂದುವರಿಸಲಾಗುತ್ತಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನೆ ಎಚ್ಚರಿಕೆ
ಸುತ್ತಮುತ್ತ ಮನೆಗಳಿರುವ ಪ್ರದೇಶದಲ್ಲೇ ಈಗಾಗಲೇ ಟವರ್‌ ನಿರ್ಮಾಣಕ್ಕಾಗಿ ಉಪಕರಣಗಳನ್ನು ತರಲಾಗಿದೆ. ಈ ಹಿನ್ನೆಲೆಯಲ್ಲಿ, ಸಮಸ್ಯೆ ಪರಿಹಾರವಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದು, ಶಾಸಕರಿಗೂ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share