Thursday, July 23, 2026
Join WhatsApp Group
HomeCrimeಬಲಸೆ ಭಟ್ರ ಮನೆ ದಾರಿ ಕೇಳಿದವ ಮಾಡಿದ್ದೇ ಬೇರೆ!

ಬಲಸೆ ಭಟ್ರ ಮನೆ ದಾರಿ ಕೇಳಿದವ ಮಾಡಿದ್ದೇ ಬೇರೆ!

ಮುರುಡೇಶ್ವರ: ʻಬಲಸೆ ಭಟ್ರ ಮನೆ ಎಲ್ಲಿ ಬರುತ್ತದೆ?ʼ ಎಂದು ದಾರಿ ಕೇಳಿದ ಅಪರಿಚಿತನನ್ನು ನಂಬಿ ಸ್ಕೂಟಿ ನಿಲ್ಲಿಸಿದ ಕಿರಾಣಿ ಅಂಗಡಿ ಮಾಲೀಕರೊಬ್ಬರು, ಕ್ಷಣಾರ್ಧದಲ್ಲೇ ಸುಮಾರು ₹1 ಲಕ್ಷ ಮೌಲ್ಯದ 22 ಗ್ರಾಂ ಚಿನ್ನದ ಸರ ಕಳೆದುಕೊಂಡ ಘಟನೆ ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡ ಬಲಸೆ, ಬೈಲೂರು ನಿವಾಸಿ, ಕಿರಾಣಿ ಅಂಗಡಿ ನಡೆಸುತ್ತಿರುವ ಮಾದೇವ ನಾಯ್ಕ (56) ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಜುಲೈ 20ರಂದು ಎಂದಿನಂತೆ ಬೆಳಗ್ಗೆಯಿಂದ ರಾತ್ರಿ ತನಕ ಅಂಗಡಿ ನಡೆಸಿದ ಮಾದೇವ ನಾಯ್ಕ ಅವರು, ರಾತ್ರಿ ಸುಮಾರು 9.30ಕ್ಕೆ ಅಂಗಡಿ ಮುಚ್ಚಿ ತಮ್ಮ ಸ್ಕೂಟಿಯಲ್ಲಿ ಮನೆಗೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ-66 ಮೂಲಕ ದೊಡ್ಡ ಬಲಸೆ ಕ್ರಾಸ್ ಬಳಿ ತಲುಪುತ್ತಿದ್ದಂತೆ, ಬಿಳಿ ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಕೈ ಸನ್ನೆ ಮಾಡಿ ವಾಹನ ನಿಲ್ಲಿಸಿದ್ದಾನೆ. ಸ್ವಲ್ಪ ದೂರದಲ್ಲಿ ಇನ್ನೋರ್ವ ಬೈಕ್‌ನೊಂದಿಗೆ ನಿಂತಿದ್ದ.

ʻಬಲಸೆ ಭಟ್ರ ಮನೆ ಎಲ್ಲಿ ಬರುತ್ತದೆ?ʼ ಎಂದು ಕೇಳಿದ ವ್ಯಕ್ತಿಗೆ ದಾರಿ ತೋರಿಸಿದ ತಕ್ಷಣವೇ, ʻದುಡ್ಡು ಎಷ್ಟು ಇಟ್ಟಿದ್ದೀರಿ?ʼ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಮಾದೇವ ನಾಯ್ಕ ಅವರು, ʻನಿನಗೆ ದುಡ್ಡು ಯಾಕೆ?ʼ ಎಂದು ಪ್ರತಿಪ್ರಶ್ನೆ ಮಾಡುತ್ತಿದ್ದಂತೆಯೇ, ಆರೋಪಿಯು ಏಕಾಏಕಿ ಅವರ ಕುತ್ತಿಗೆಯಲ್ಲಿದ್ದ 22 ಗ್ರಾಂ ತೂಕದ, ಅಂದಾಜು ₹1 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ.

ತಕ್ಷಣವೇ ಅಲ್ಲೇ ಕಾಯುತ್ತಿದ್ದ ತನ್ನ ಸಹಚರನ ಬೈಕ್ ಏರಿ ಮಂಕಿ ಕಡೆಗೆ ಇಬ್ಬರೂ ಪರಾರಿಯಾಗಿದ್ದಾರೆ. ಮಾದೇವ ನಾಯ್ಕ ಅವರು ಜೋರಾಗಿ ಕೂಗಿದ ಬಳಿಕ ಸ್ಥಳಕ್ಕೆ ಬಂದ ಪರಿಚಿತ ವಿಶ್ವ ದೇವಾಡಿಗ ಅವರಿಗೆ ವಿಷಯ ತಿಳಿಸಿದ್ದಾರೆ.

ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಬ್ಬರು ಆರೋಪಿಗಳ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ಕೇಳಿದರೆ ದಾರಿ ತೋರಿಸಿ… ಆದರೆ ಮಧ್ಯರಾತ್ರಿಯಲ್ಲಿ ಅಪರಿಚಿತರಿಗಾಗಿ ಸ್ಕೂಟಿ ನಿಲ್ಲಿಸುವ ಮುನ್ನ ಎರಡು ಬಾರಿ ಯೋಚಿಸಿ!

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share