Thursday, July 23, 2026
Join WhatsApp Group
HomeStateಮೊಬೈಲ್‌ನಲ್ಲೇ ಮದುವೆ ಕಾರ್ಡ್; 15 ನಿಮಿಷದಲ್ಲಿ ಖಾತೆ ಖಾಲಿ!

ಮೊಬೈಲ್‌ನಲ್ಲೇ ಮದುವೆ ಕಾರ್ಡ್; 15 ನಿಮಿಷದಲ್ಲಿ ಖಾತೆ ಖಾಲಿ!

ಬೆಂಗಳೂರು: ವಾಟ್ಸಾಪ್‌ನಲ್ಲಿ ಬಂದ ಮದುವೆ ಆಹ್ವಾನ ಪತ್ರಿಕೆ ನೋಡಿ, “ಊಟ ಎಲ್ಲಿ ಇಟ್ಟಿರಬಹುದು?” ಎಂದು ಕುತೂಹಲದಿಂದ ಫೈಲ್‌ ತೆರೆದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ, ಮದುವೆ ಊಟ ಸಿಗುವ ಮೊದಲೇ ಬ್ಯಾಂಕ್‌ ಖಾತೆಯೇ ಬರೋಬ್ಬರಿ ₹9.96 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.

ಅರಣ್ಯ ಇಲಾಖೆಯ ನೌಕರ ರಮೇಶ್‌ ಬಾಬು ಅವರಿಗೆ ಜುಲೈ 14ರ ಸಂಜೆ ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಮದುವೆ ಆಹ್ವಾನ ಬಂದಿದೆ. ಪರಿಚಿತರದ್ದಿರಬಹುದು ಎಂದುಕೊಂಡು ಅದರಲ್ಲಿದ್ದ ಫೈಲ್‌ ಅನ್ನು ತೆರೆದಿದ್ದಾರೆ. ಆದರೆ ಅದು ಆಹ್ವಾನ ಪತ್ರಿಕೆ ಅಲ್ಲ, ಎಪಿಕೆ (APK) ಫೈಲ್ ಎಂಬುದು ಬಳಿಕ ಗೊತ್ತಾಗಿದೆ.

ಫೈಲ್‌ ತೆರೆದ ಸುಮಾರು 15 ನಿಮಿಷಗಳಲ್ಲೇ ಅವರ ಮೊಬೈಲ್‌ಗೆ ಬ್ಯಾಂಕ್‌ ಖಾತೆಯಿಂದ ಹಣ ಕಡಿತವಾಗುತ್ತಿರುವ ಎಸ್‌ಎಂಎಸ್‌ಗಳು ಒಂದರ ಹಿಂದೊಂದು ಬರಲು ಆರಂಭಿಸಿವೆ. ಖಾತೆ ಪರಿಶೀಲಿಸಿದಾಗ ವಿವಿಧ ಹಂತಗಳಲ್ಲಿ ಒಟ್ಟು ₹9.96 ಲಕ್ಷ ವಂಚಕರ ಖಾತೆಗೆ ಜಮೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಉತ್ತರ ವಿಭಾಗದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸೈಬರ್‌ ತಜ್ಞರ ಪ್ರಕಾರ, ವಾಟ್ಸಾಪ್‌ನಲ್ಲಿ ಬರುವ APK ಫೈಲ್ ಎಂದರೆ ಅದು ಫೋಟೋ ಅಥವಾ ಪಿಡಿಎಫ್‌ ಅಲ್ಲ, ಮೊಬೈಲ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್‌ ಮಾಡುವ ಫೈಲ್‌. ಇಂತಹ ಫೈಲ್‌ಗಳಲ್ಲಿ ದುರುದ್ದೇಶಪೂರಿತ ತಂತ್ರಾಂಶ ಅಡಗಿರುವ ಸಾಧ್ಯತೆ ಹೆಚ್ಚಿದ್ದು, ಒಮ್ಮೆ ತೆರೆದರೆ ಮೊಬೈಲ್‌ನಲ್ಲಿರುವ ಬ್ಯಾಂಕಿಂಗ್‌ ಮಾಹಿತಿ, ಒಟಿಪಿ ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು.

ಮದುವೆಯ ಊಟ ಒಂದು ದಿನ ತಪ್ಪಿದರೆ ಪರವಾಗಿಲ್ಲ… ಆದರೆ ಅಪರಿಚಿತ ಸಂಖ್ಯೆಯಿಂದ ಬಂದ “ಮದುವೆ ಕಾರ್ಡ್‌” ನೋಡಿ ಕುತೂಹಲಕ್ಕೆ ಬಿದ್ದು ಕ್ಲಿಕ್‌ ಮಾಡಿದರೆ, ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ಗೆ ಮಾತ್ರ ಶ್ರಾದ್ಧ ಆಗುವ ಸಾಧ್ಯತೆ ಇದೆ! ಹೀಗಾಗಿ, ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಬರುವ APK ಫೈಲ್‌ಗಳನ್ನು ಯಾವುದೇ ಕಾರಣಕ್ಕೂ ತೆರೆಯಬೇಡಿ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share