Ad
Ad
Ad
Home State ಮೆಟ್ರೋದಲ್ಲಿ ಕಲಿತ ಶಿಸ್ತು ಹೊರಜಗತ್ತಿನಲ್ಲೂ ಇರಲಿ!

ಮೆಟ್ರೋದಲ್ಲಿ ಕಲಿತ ಶಿಸ್ತು ಹೊರಜಗತ್ತಿನಲ್ಲೂ ಇರಲಿ!

0
9

ಮೆಟ್ರೋದಲ್ಲಿ ನನ್ನ ಓಡಾಟದ ಪಯಣ ಶುರುವಾಗಿ ಇಂದಿಗೆ ಮೂರು ವರ್ಷಗಳು ಪೂರ್ಣಗೊಂಡಿವೆ. ನನ್ನ ಪ್ರಕಾರ ಮೆಟ್ರೋ ಪಯಣವೆಂದರೆ ಕೇವಲ ಓಡಾಟವಷ್ಟೇ ಅಲ್ಲ, ತಿಳಿದುಕೊಳ್ಳುವ ವಿಚಾರಗಳು ಸಾಕಷ್ಟಿವೆ.

Ad

ಮೆಟ್ರೋದಲ್ಲಿ ನೀಡುವ ಸೂಚನೆಗಳೇ ಬಹಳ ಸೊಗಸು. ಮುಂದಿನ ನಿಲ್ದಾಣ ಯಾವುದು, ಕೊನೆಯ ನಿಲ್ದಾಣ ಯಾವುದು, ರೈಲು ಯಾವ ಸಮಯಕ್ಕೆ ತಲುಪಲಿದೆ ಎಂಬ ಮಾಹಿತಿ ಡಿಸ್‌ಪ್ಲೇಯಲ್ಲಿ ಕಾಣಿಸುತ್ತಿರುತ್ತದೆ.

ಇನ್ನು ರೈಲಿನೊಳಗೆ ಕುಳಿತ ನಂತರ ಮುಂಬರುವ ನಿಲ್ದಾಣಗಳ ಮಾಹಿತಿ, ಪ್ಲಾಟ್‌ಫಾರಂ ಮತ್ತು ರೈಲಿನ ನಡುವಿನ ಅಂತರದ ಬಗ್ಗೆ ಎಚ್ಚರಿಕೆ, ಸರದಿ ಸಾಲಿನಲ್ಲಿ ಹತ್ತುವ ಮತ್ತು ಇಳಿಯುವ ಸೂಚನೆಗಳು, ಮಧ್ಯೆ ಒಂದೆರಡು ಜಾಹೀರಾತುಗಳು… ಎಲ್ಲವೂ ಹಿತಮಿತವಾಗಿ ಇರುತ್ತವೆ.

ಕೆಲವು ಕಾಲೇಜುಗಳು, ಅಪ್ಲಿಕೇಶನ್‌ಗಳ ಜಾಹೀರಾತುಗಳ ಜೊತೆಗೆ ಒರಗಬೇಡಿ, ಹಾಳು ಮಾಡಬೇಡಿ, ಕುಡಿಯಬೇಡಿ, ತಿನ್ನಬೇಡಿ ಎಂಬ ಸೂಚನೆಗಳೂ ಆಗಾಗ ಕಾಣಿಸುತ್ತವೆ. ಎಲ್ಲಿ ನೋಡಿದರೂ ನೆಲದ ಮೇಲೆ ಕಸದ ಚೂರು ಕಾಣಸಿಗುವುದಿಲ್ಲ. ಉಗುಳಿದರೆ ದಂಡ ಎಂಬ ಎಚ್ಚರಿಕೆಯ ಫಲಕಗಳು ಅಲ್ಲಲ್ಲಿ ಇರುತ್ತವೆ. ಬೋಗಿಗಳಲ್ಲೂ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಜಾಹೀರಾತುಗಳಿರುತ್ತವೆ.

ಮೊದಲ ಬೋಗಿ ಮಹಿಳೆಯರಿಗೆ ಮೀಸಲು. ಉಳಿದ ಬೋಗಿಗಳಲ್ಲೂ ಹಿರಿಯ ನಾಗರಿಕರು, ಅಂಗವಿಕಲರು, ಗರ್ಭಿಣಿಯರು ಹೀಗೆ ಅಗತ್ಯವಿರುವವರಿಗೆ ಮೀಸಲಾದ ಆಸನಗಳಿವೆ. ಟಿಕೆಟ್ ವ್ಯವಸ್ಥೆಯೂ ನಿಯಮಬದ್ಧವಾಗಿದೆ. ಟೋಕನ್ ಇದ್ದರೆ ಮಾತ್ರ ಪ್ರವೇಶದ ದ್ವಾರ ತೆರೆಯುತ್ತದೆ. ಹೀಗೆ ಪ್ರಯಾಣಿಕರಿಗೆ ಅಗತ್ಯವಾದ ಮಾಹಿತಿ ನೀಡುವ ನಾಮಫಲಕಗಳೂ ಎಲ್ಲೆಂದರಲ್ಲಿ ಕಾಣಸಿಗುತ್ತವೆ.

ಇಷ್ಟೆಲ್ಲ ಶಿಸ್ತು, ಸ್ವಚ್ಛತೆ ಮತ್ತು ನಿಯಮಗಳನ್ನು ಮೆಟ್ರೋದಲ್ಲಿ ಕಾಣುವ ನಾವು, ಮೆಟ್ರೋದಿಂದ ಕೆಳಗಿಳಿದ ಕೂಡಲೇ ಮತ್ತೆ ನಮ್ಮದೇ ವಿಚಿತ್ರ ಅಭ್ಯಾಸಗಳಿಗೆ ಮರಳುತ್ತೇವೆ!

ಎಲ್ಲಿ ನೋಡಿದರೂ ಕಸ ಎಸೆಯುವುದು, ಕಂಡಕಂಡಲ್ಲಿ ಉಗುಳುವುದು, ಹಿರಿಯರಿಗೆ ಗೌರವ ನೀಡದಿರುವುದು ಸಾಮಾನ್ಯವಾಗಿಬಿಟ್ಟಿದೆ. ಗರ್ಭಿಣಿಯರು ಅಥವಾ ವಯಸ್ಸಾದವರು ಬಸ್ಸಿನಲ್ಲಿ ನಿಂತಿದ್ದರೂ, ಅವರಿಗೆ ಆಸನ ಬಿಟ್ಟುಕೊಡೋಣ ಎಂಬ ಮನಸ್ಸು ಕೆಲವರಲ್ಲಿ ಮೂಡುವುದಿಲ್ಲ, ಸೂಚನಾ ಫಲಕಗಳಿಗೂ ಬೆಲೆ ಕೊಡುವುದಿಲ್ಲ.

ಹೀಗಿರುವಾಗ ನನ್ನದೊಂದು ಸಣ್ಣ ಆಶಯವಿದೆ. ಮೆಟ್ರೋದಲ್ಲಿ ನಾವು ಪಾಲಿಸುವ ಶಿಸ್ತು, ವಿನಮ್ರತೆ ಮತ್ತು ಸನ್ನಡತೆ ಕೇವಲ ಮೆಟ್ರೋ ಪಯಣಕ್ಕೆ ಸೀಮಿತವಾಗದಿರಲಿ. ನಮ್ಮ ದಿನನಿತ್ಯದ ಹೊರಜಗತ್ತಿನ ಬದುಕಿನಲ್ಲೂ ಸಾಧ್ಯವಾದಷ್ಟಾದರೂ ಪಾಲಿಸೋಣ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ, ಹಿರಿಯರಿಗೆ ಗೌರವ ನೀಡೋಣ, ಅಗತ್ಯವಿರುವವರಿಗೆ ನೆರವಾಗೋಣ.

ಮೆಟ್ರೋದಲ್ಲಿ ಕಲಿತ ಶಿಸ್ತನ್ನು ಮೆಟ್ರೋದಿಂದ ಹೊರಬಂದ ಮೇಲೂ ಪಾಲಿಸೋಣ. ನಮ್ಮಿಂದಲೇ ಬದಲಾವಣೆ ಶುರುವಾಗಲಿ!

✍️ ನಂದಕುಮಾರ್

Previous articleಪೌಷ್ಟಿಕ ಆಹಾರವೇ ಆರೋಗ್ಯದ ಬುನಾದಿ
Next articleಹಸಿರು ಸಿರಿಗೆ ಕುತ್ತು ತಂದ ಬೇಡ್ತಿ ಯೋಜನೆ!
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!