Friday, July 24, 2026
Join WhatsApp Group
HomeLocal Newsಜನಸ್ನೇಹಿ ಪೊಲೀಸ್ ಅಧಿಕಾರಿಗೆ ಭಾವನಾತ್ಮಕ ಬೀಳ್ಕೊಡುಗೆ

ಜನಸ್ನೇಹಿ ಪೊಲೀಸ್ ಅಧಿಕಾರಿಗೆ ಭಾವನಾತ್ಮಕ ಬೀಳ್ಕೊಡುಗೆ

ಯಲ್ಲಾಪುರ: ಯಲ್ಲಾಪುರ ಪೊಲೀಸ್ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿ ರೂಪಿಸಿದ್ದ ಪಿಐ Ramesh Hanapur ಅವರು ಮುಂಡಗೋಡಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಅವರನ್ನು ಭಾವನಾತ್ಮಕವಾಗಿ ಬೀಳ್ಕೊಟ್ಟರು.

ಎರಡುವರೆ ವರ್ಷದ ಹಿಂದೆ ಯಲ್ಲಾಪುರ ಪೊಲೀಸ್ ಠಾಣೆಯ ಪಿಐ ಆಗಿ ಅಧಿಕಾರವಹಿಸಿಕೊಂಡಿದ್ದ ರಮೇಶ ಹಾನಾಪುರ ಅವರು, ಈ ಹಿಂದೆ ಲೋಕಾಯುಕ್ತ ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸಿದ್ದ ಅನುಭವದ ಆಧಾರದಲ್ಲಿ ಅನೇಕ ಅಪರಾಧ ಪ್ರಕರಣಗಳನ್ನು ಭೇದಿಸಿದ್ದರು. ಅಧಿಕಾರದಲ್ಲಿದ್ದರೂ ಅದನ್ನು ದರ್ಪವಾಗಿ ಪ್ರದರ್ಶಿಸದೆ, ಸಾರ್ವಜನಿಕರೊಂದಿಗೆ ಸಾಮಾನ್ಯರಂತೆ ಬೆರೆತು ನಡೆದುಕೊಳ್ಳುತ್ತಿದ್ದ ಅವರು ಠಾಣೆಗೆ ಬರುವ ಪ್ರತಿಯೊಬ್ಬರನ್ನೂ ಗೌರವದಿಂದ ಬರಮಾಡಿಕೊಳ್ಳುತ್ತಿದ್ದರು.

ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡುವುದು, ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುವುದು ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಅವರ ಕಾರ್ಯಶೈಲಿಯ ವಿಶೇಷವಾಗಿತ್ತು. ತಾವಷ್ಟೇ ಅಲ್ಲದೆ ಠಾಣೆಯಲ್ಲಿನ ಸಿಬ್ಬಂದಿಯೂ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸುವಂತೆ ಅವರು ನೋಡಿಕೊಳ್ಳುತ್ತಿದ್ದರು.

ಕ್ಲಿಷ್ಟಕರ ಪ್ರಕರಣಗಳನ್ನೂ ಚಾಣಾಕ್ಷತನದಿಂದ ಬಗೆಹರಿಸಿದ್ದ ಅವರು, ದ್ವೇಷ ಹಾಗೂ ಗಲಭೆಯಂತಹ ಸೂಕ್ಷ್ಮ ಪರಿಸ್ಥಿತಿಗಳನ್ನೂ ಸಮರ್ಥವಾಗಿ ನಿಭಾಯಿಸಿದ್ದರು. ಸಾಕಷ್ಟು ಒತ್ತಡಗಳ ನಡುವೆಯೂ ನೊಂದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದ ಅವರು, ಸಾಮಾನ್ಯ ಜನರು ಮತ್ತು ಪ್ರಭಾವಿಗಳನ್ನು ಸಮಾನ ಗೌರವದಿಂದ ಕಾಣುತ್ತಿದ್ದರು.

ಅತ್ಯಂತ ಮೃದು ಸ್ವಭಾವ ಹಾಗೂ ಪರಿಶುದ್ಧ ವ್ಯಕ್ತಿತ್ವ ಹೊಂದಿದ್ದ ರಮೇಶ ಹಾನಾಪುರ ಅವರು ಯಾರನ್ನೂ ಅವಾಚ್ಯವಾಗಿ ನಿಂದಿಸಿದ ಉದಾಹರಣೆ ಇಲ್ಲವೆಂದು ಸಾರ್ವಜನಿಕರೇ ಹೇಳುತ್ತಾರೆ.

ಅವರ ಸೇವೆ ಮತ್ತು ಸಾಧನೆಗೆ ರಾಷ್ಟ್ರಪತಿ ಪದಕ ಹಾಗೂ ಮುಖ್ಯಮಂತ್ರಿ ಪದಕ ಲಭಿಸಿದ್ದು, ಅವರು ಯಲ್ಲಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲೇ ಈ ಗೌರವಗಳು ದೊರೆತಿರುವುದು ಠಾಣೆಯ ಹಿರಿಮೆಯನ್ನೂ ಹೆಚ್ಚಿಸಿದೆ.

ಯಲ್ಲಾಪುರ ಜಾತ್ರೆ ಅವಧಿಯಲ್ಲೇ ಅವರ ವರ್ಗಾವಣೆ ಆದೇಶ ಬಂದಿದ್ದರೂ ಸ್ಥಳ ನಿಯುಕ್ತಿ ಆಗಿರಲಿಲ್ಲ. ಬಳಿಕ ಆಡಳಿತಾತ್ಮಕ ಕಾರಣಗಳಿಂದ ಅವರು ಇಲ್ಲಿಯೇ ಮುಂದುವರಿದಿದ್ದರು. ಇದೀಗ ಸರ್ಕಾರದಿಂದ Mundgod ಪಿಐ ಆಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಅವರು ಗುರುವಾರ ಯಲ್ಲಾಪುರ ಠಾಣೆಗೆ ವಿದಾಯ ಹೇಳಿದರು.

ತಮ್ಮ ಕಚೇರಿಯಿಂದ ಹೊರಬರುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ಅವರನ್ನು ಸುತ್ತುವರಿದು ಪುಷ್ಪವೃಷಿಯೊಂದಿಗೆ ಗೌರವ ಸಲ್ಲಿಸಿದರು. ಎರಡುವರೆ ವರ್ಷದ ಸೇವಾ ಅವಧಿಯನ್ನು ಸ್ಮರಿಸಿಕೊಂಡ ಸಿಬ್ಬಂದಿ ಹಾಗೂ ಸಾರ್ವಜನಿಕರು ಅವರನ್ನು ಭಾವನಾತ್ಮಕವಾಗಿ ಬೀಳ್ಕೊಟ್ಟರು.

PI ರಮೇಶ್ ಹಾನಾಪುರ

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share