ಸಿದ್ದಾಪುರ: ಸರ್ಕಾರದ ಯೋಜನೆಗಳು ಕೇವಲ ಕಡತ ಮತ್ತು ಪಟ್ಟಿಗಳಲ್ಲೇ ಉಳಿಯದೆ ಬಡವರು ಹಾಗೂ ಸಾಮಾನ್ಯ ಜನರ ಬದುಕಿನಲ್ಲಿ ನಿಜವಾದ ಬದಲಾವಣೆ ತರಬೇಕು. ಜನರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ತ್ವರಿತವಾಗಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಆಂದೋಲನ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸಿದ್ದಾಪುರ ತಾಲೂಕಿನ ಹಲಿಗೇರಿ ಹೋಬಳಿಯಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ರಸ್ತೆ, ಚರಂಡಿ, ಕುಡಿಯುವ ನೀರು, ಶಾಲಾ-ಕಾಲೇಜು ಹಾಗೂ ಇತರ ಮೂಲಸೌಕರ್ಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ‘ಪ್ರಜಾಸೇವೆ’ ಸಭೆಗಳು ಸಹಕಾರಿಯಾಗಿವೆ ಎಂದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ 1.20 ಕೋಟಿಗೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆಯುತ್ತಿವೆ. ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳಿಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಭೂ ಗ್ಯಾರಂಟಿ ಯೋಜನೆಯಡಿ ರಾಜ್ಯದ ನಿವೇಶನರಹಿತರಿಗೆ 5 ಲಕ್ಷ ನಿವೇಶನಗಳನ್ನು ನೀಡುವ ಕಾರ್ಯಕ್ರಮ ಜಾರಿಯಲ್ಲಿದ್ದು, ಇದರಿಂದ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 7,000ರಿಂದ 8,000 ನಿವೇಶನಗಳು ದೊರೆಯುವ ನಿರೀಕ್ಷೆಯಿದೆ ಎಂದು ಭೀಮಣ್ಣ ನಾಯ್ಕ ಹೇಳಿದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ‘ಪ್ರಜಾಸೇವೆ’ ಆಂದೋಲನವು ಸಾರ್ವಜನಿಕರ ಅಹವಾಲುಗಳನ್ನು ತ್ವರಿತವಾಗಿ ಆಲಿಸಿ ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಉದ್ದೇಶ ಹೊಂದಿದೆ. ಸಭೆಯಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಆನ್ಲೈನ್ನಲ್ಲಿ ದಾಖಲಿಸಲಾಗುವುದು. ಸಾಧ್ಯವಾದಷ್ಟು 20 ದಿನಗಳೊಳಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದನ್ನು ಎದುರಿಸಲು ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ಮಂಜೂರು ಮಾಡಿದ್ದು, ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಭೂ ಗ್ಯಾರಂಟಿ ಯೋಜನೆಯಡಿ ನಿವೇಶನ ನೀಡಲು ಜಿಲ್ಲೆಯಲ್ಲಿ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಹಲಿಗೇರಿ ಹೋಬಳಿಯಲ್ಲಿ 63 ಎಕರೆ ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ನಿವೇಶನರಹಿತರು ಅರ್ಜಿ ಸಲ್ಲಿಸುವ ಕುರಿತು ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವ್ಯಾಪಕವಾಗಿ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಅಪಾಯಕಾರಿ ಮರಗಳ ತೆರವು, ವನ್ಯಜೀವಿಗಳಿಂದ ಬೆಳೆ ಹಾನಿ ತಡೆ, ಅತಿಕ್ರಮಣ ತೆರವು ಕುರಿತ ಗೊಂದಲ, ಬಸ್ ಸೌಲಭ್ಯ, ಕಂದಾಯ ದಾಖಲೆಗಳ ತಿದ್ದುಪಡಿ ಹಾಗೂ ಪಡಿತರ ಚೀಟಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಜಿಲ್ಲೆಯಲ್ಲಿನ ಅತಿಕ್ರಮಣ ತೆರವು ಕುರಿತ ಗೊಂದಲಗಳ ಬಗ್ಗೆ ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ವನ್ಯಜೀವಿ ಹಾವಳಿ ತಡೆಗಟ್ಟಲು ಅಗತ್ಯವಿರುವ ಕಡೆಗಳಲ್ಲಿ ಕಂದಕ ನಿರ್ಮಾಣ ಹಾಗೂ ಸೋಲಾರ್ ಬೇಲಿ ಅಳವಡಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಎಚ್. ಸೂರ್ಯವಂಶಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ‘ಪ್ರಜಾಸೇವೆ’ ಕೇವಲ ಸಮಸ್ಯೆಗಳನ್ನು ಹೇಳಿಕೊಳ್ಳುವ ವೇದಿಕೆಯಲ್ಲ. ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕರ ಸಲಹೆಗಳನ್ನೂ ಅಧಿಕಾರಿಗಳ ಗಮನಕ್ಕೆ ತರಬಹುದು. ಇಂತಹ ಸಲಹೆಗಳು ಮುಂದಿನ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ‘ಆಸರೆ’ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಆನ್ಲೈನ್ ವಂಚನೆ ಹಾಗೂ ಸಂಶಯಾಸ್ಪದ ಲಿಂಕ್ಗಳ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅವರು, ಅಪರಿಚಿತ ಲಿಂಕ್ಗಳನ್ನು ತೆರೆಯದಂತೆ ಮನವಿ ಮಾಡಿದರು. ಯುವಜನರು ಮಾದಕವಸ್ತುಗಳಿಂದ ದೂರವಿರಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಉಪವಿಭಾಗಾಧಿಕಾರಿ ಚಂದ್ರಶೇಖರ್ ಆರ್.ಜಿ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಎಂ. ಹಿತ್ತಲಕೊಪ್ಪ, ತಹಸೀಲ್ದಾರ್ ಮಂಜುಳಾ ನಾಯಕ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಶುಪಾಲನಾ ಇಲಾಖೆಗಳ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಹಾಗೂ ವಿಜಿ ಜಿ ರಾಮ್ ಯೋಜನೆಯಡಿ ಜಾಬ್ ಕಾರ್ಡ್ಗಳನ್ನು ವಿತರಿಸಲಾಯಿತು.