ಕುಮಟಾ: ಮೊಬೈಲ್ ಖರೀದಿಸಿದ ಬಳಿಕ ಫೋನ್‌ಪೇ ಮೂಲಕ ಹಣ ಪಾವತಿಸಿರುವುದಾಗಿ ನಕಲಿ ಸಂದೇಶ ತೋರಿಸಿ 16,700 ರೂ ಮೌಲ್ಯದ ಮೊಬೈಲ್ ತೆಗೆದುಕೊಂಡು ಹೋಗಿರುವ ಆರೋಪದ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಾತೋಶ್ರೀ ಏಜೆನ್ಸೀಸ್ ಮೊಬೈಲ್ ಶಾಪ್‌ನಲ್ಲಿ ಸೆ.10ರಂದು ಮಧ್ಯಾಹ್ನ 2.50ರ ಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬರು ರಿಯಲ್‌ಮಿ ಕಂಪನಿಯ C-100X ಡೀಪ್ ಬ್ಲೂ ಬಣ್ಣದ, 4GB RAM ಹಾಗೂ 64GB ಮೆಮೊರಿ ಹೊಂದಿರುವ ಮೊಬೈಲ್ ಫೋನ್ ಖರೀದಿಸಿದ್ದಾನೆ.
ಮೊಬೈಲ್ ಖರೀದಿಯ ಬಿಲ್ ಮೊತ್ತ16,700 ರೂ ಹಣವನ್ನು ಫೋನ್‌ಪೇ ಮೂಲಕ ಪಾವತಿಸಿರುವುದಾಗಿ ನಕಲಿ ಮೆಸೇಜ್ ತೋರಿಸಿ, ಹಣ ಪಾವತಿಸದೇ ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಕುಮಟಾ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿತನ ವಿರುದ್ಧ ಪ್ರಕರಣ ದಾಖಲಾಗಿದೆ.