ಯಲ್ಲಾಪುರ: ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಕೈಗೊಂಡಿರುವ ಕ್ರಮವನ್ನು ಸ್ವಾಗತಿಸುವುದಾದರೆ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸುವುದು ಏಕೆ ಎಂಬ ಪ್ರಶ್ನೆಯನ್ನು ಸಾಮಾಜಿಕ ಕಾರ್ಯಕರ್ತ ರಾಮು ನಾಯ್ಕ ಎತ್ತಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಮೃತಪಟ್ಟವರು, ಅನರ್ಹರು, ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಸದಸ್ಯರು ಹಾಗೂ ನಕಲಿ ದಾಖಲೆಗಳ ಮೂಲಕ ಸೇರ್ಪಡೆಯಾದವರು ಇದ್ದಾರೆ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಮರುಪರಿಶೀಲನೆಗೆ ಮುಂದಾಗಿದೆ. ಸರ್ಕಾರದ ಈ ಕ್ರಮವನ್ನು ಸಮರ್ಥಿಸಬಹುದಾದ ಕಾರಣಗಳಿವೆ.
ಅದೇ ರೀತಿ ಕೇಂದ್ರ ಚುನಾವಣಾ ಆಯೋಗವೂ ಮತದಾರರ ಪಟ್ಟಿಯಲ್ಲಿ ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು, ನಕಲಿ ದಾಖಲೆಗಳ ಮೂಲಕ ಸೇರ್ಪಡೆಯಾದವರು ಹಾಗೂ ಅಕ್ರಮ ನುಸುಳುಕೋರರ ಹೆಸರುಗಳನ್ನು ಗುರುತಿಸಿ ತೆಗೆದುಹಾಕುವ ಉದ್ದೇಶದಿಂದ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಕೈಗೊಂಡಿದೆ.
ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿಯನ್ನು ಕೇವಲ ಮೂರು ವರ್ಷಗಳ ಬಳಿಕ ಪರಿಷ್ಕರಿಸುವುದು ಅಗತ್ಯ ಎಂದು ಸರ್ಕಾರ ಭಾವಿಸಿದರೆ, ಹಲವು ವರ್ಷಗಳ ಹಿಂದಿನ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸುವುದು ತಾರ್ಕಿಕವಾಗಿ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೃತಪಟ್ಟವರು, ಅನರ್ಹರು, ನಕಲಿ ದಾಖಲೆ ಹೊಂದಿದವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದರಿಂದ ಯಾರಿಗೂ ನಷ್ಟವಾಗಬಾರದು. ಬದಲಾಗಿ ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಮತ್ತು ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಪ್ರಕ್ರಿಯೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವ ಬದಲು, ಚುನಾವಣಾ ವ್ಯವಸ್ಥೆಯನ್ನು ಬಲಪಡಿಸುವ ಕ್ರಮವಾಗಿ ಪರಿಗಣಿಸಬೇಕು ಎಂದು ರಾಮು ನಾಯ್ಕ ಒತ್ತಾಯಿಸಿದ್ದಾರೆ.