Ad
Home Local News ಮಾದರಿಯಾದ ಸ್ವಯಂಪ್ರೇರಿತ ಸ್ವಚ್ಛತಾ ಅಭಿಯಾನ

ಮಾದರಿಯಾದ ಸ್ವಯಂಪ್ರೇರಿತ ಸ್ವಚ್ಛತಾ ಅಭಿಯಾನ

0
65

ಯಲ್ಲಾಪುರ: ಆಡಳಿತವೇ ಎಲ್ಲಾ ಸ್ಥಳಗಳಲ್ಲಿ ಸ್ವಚ್ಛತೆ ನಿರ್ವಹಿಸಬೇಕು ಎಂದು ಕಾಯುವ ಬದಲು, “ನಮ್ಮ ಪರಿಸರವನ್ನು ನಾವು ಕಾಪಾಡೋಣ” ಎಂಬ ಮನೋಭಾವದಿಂದ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಡಿಕೇರಿ, ನಂದೊಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಕೈಗೊಂಡಿರುವ ಸ್ವಯಂಪ್ರೇರಿತ ಸ್ವಚ್ಛತಾ ಅಭಿಯಾನ ಗಮನ ಸೆಳೆದಿದೆ.

ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಕವಡಿಕೇರಿ ದೇವಸ್ಥಾನಕ್ಕೆ ಪ್ರತಿನಿತ್ಯ ಸಾಕಷ್ಟು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಅವರು ತೆರಳಿದ ಬಳಿಕ ಉಳಿಯುವುದು ಪ್ಲಾಸ್ಟಿಕ್ ಬಾಟಲಿಗಳು, ನೀರಿನ ಪೌಚ್‌ಗಳು, ಆಹಾರದ ಕವರ್‌ಗಳು ಸೇರಿದಂತೆ ತ್ಯಾಜ್ಯದ ರಾಶಿ. ಇದು ಕೇವಲ ಪರಿಸರದ ಸೌಂದರ್ಯವನ್ನಷ್ಟೇ ಹಾಳು ಮಾಡುತ್ತಿಲ್ಲ, ಮೂಕಪ್ರಾಣಿಗಳ ಜೀವಕ್ಕೂ ಅಪಾಯ ಉಂಟುಮಾಡುತ್ತಿದೆ.

ಕಾಡಿಗೆ ಮೇಯಲು ಬಿಟ್ಟ ಹಸುಗಳು ಆಹಾರದಾಸೆಯಿಂದ ಪ್ಲಾಸ್ಟಿಕ್ ಕಸವನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಘಟನೆಗಳು ಈ ಭಾಗದಲ್ಲಿ ಕಂಡುಬಂದಿವೆ. ಈ ನೋವಿನ ಸಂಗತಿಯನ್ನು ಮನಗಂಡ ಸ್ಥಳೀಯ ಸಮಾನ ಮನಸ್ಕರು ಕೈಜೋಡಿಸಿ, ಕವಡಿಕೇರಿ ದೇವಸ್ಥಾನದ ಮುಂಭಾಗದಿಂದ ಬಸ್ ನಿಲ್ದಾಣದವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು.

ನರಸಿಂಹ ಕೊಣೆಮನೆ, ನಾಗರಾಜ ಕವಡಿಕೇರಿ, ಗೋಪಾಲಕೃಷ್ಣ ಕವಡಿಕೇರಿ, ರಾಮಚಂದ್ರ ಕವಡಿಕೇರಿ, ಗೋಪಾಲಕೃಷ್ಣ ಭಟ್ಟ ಕವಡಿಕೇರಿ, ರಾಮಕೃಷ್ಣ ಕವಡಿಕೇರಿ, ನಾಗರಾಜ ಭಟ್ಟ ಕವಡಿಕೇರಿ, ಶ್ರೀಧರ ಭಟ್ಟ ಕವಡಿಕೇರಿ, ವೆಂಕಟ್ರಮಣ ಭಟ್ಟ ಕವಡಿಕೇರಿ, ನರಸಿಂಹ ಭಟ್ಟ ಕವಡಿಕೇರಿ, ಅರವಿಂದ ಕವಡಿಕೇರಿ, ಗಣಪತಿ ಭಟ್ಟ ಕವಡಿಕೇರಿ, ಶ್ರೀವತ್ಸ ಬಟ್ಲಗುಂಡಿ, ವೆಂಕಟ್ರಮಣ ಭಟ್ಟ ಕಿರಕುಂಬತ್ತಿ, ಗಜಾನನ ಹೆಗಡೆ ಬೆಳಖಂಡ, ರಾಮಕೃಷ್ಣ ಹೆಗಡೆ ಶಿಂಬ್ಳಗಾರ, ಗಂಗಾಧರ ಗುಮ್ಮಾನಿ, ವಿನಾಯಕ ಗುಡ್ನಮನೆ, ಹಿರಿಯರಾದ ಶಿವರಾಮ ಭಟ್ಟ ಗಾಣಮನೆತಗ್ಗು ಹಾಗೂ ನಾರಾಯಣ ಭಟ್ಟ ತೆಂಗಿನಜಡ್ಡಿ ಸೇರಿದಂತೆ ಹಲವರು ಈ ಅಭಿಯಾನದಲ್ಲಿ ಪಾಲ್ಗೊಂಡರು. ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳು ಸಹ ಈ ಕಾರ್ಯಕ್ಕೆ ಕೈಜೋಡಿಸಿದರು.

ಗ್ರಾಮಸ್ಥರ ಈ ಪ್ರಯತ್ನ ಕೇವಲ ಸ್ವಚ್ಛತಾ ಕಾರ್ಯಕ್ಕೆ ಸೀಮಿತವಾಗಿರದೆ, ಪರಿಸರದ ಬಗ್ಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಸಂದೇಶವನ್ನೂ ನೀಡಿದೆ.

“ಪ್ರವಾಸಿ ತಾಣಗಳನ್ನು ನೋಡುವಷ್ಟು ಮಾತ್ರವಲ್ಲ, ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಪ್ರತಿಯೊಬ್ಬ ಪ್ರವಾಸಿಗನ ಜವಾಬ್ದಾರಿ” ಎಂಬ ಸಂದೇಶವನ್ನು ಈ ಅಭಿಯಾನ ಪರಿಣಾಮಕಾರಿಯಾಗಿ ಸಾರಿದೆ. ಕವಡಿಕೆರೆಯಿಂದ ಆರಂಭಿಸಿರುವ ಸ್ವಚ್ಛತಾ ಅಭಿಯಾನವನ್ನು ಪಂಚಾಯತದವರೊಡಗೂಡಿ ಮುಂದಿನ ದಿನಗಳಲ್ಲಿ ಪಂಚಾಯತ ವ್ಯಾಪ್ತಿಯ ಇತರ ಸ್ಥಳಗಳಲ್ಲೂ ನಡೆಸಲು ಉದ್ದೇಶಿಸಿದೆ.

ಸ್ಥಳೀಯರ ಈ ಮಾದರಿ ಪ್ರಯತ್ನ ಇತರ ಗ್ರಾಮಗಳಿಗೂ ಪ್ರೇರಣೆಯಾಗಲಿ ಎಂಬುದು ಪರಿಸರ ಪ್ರೇಮಿಗಳ ಆಶಯವಾಗಿದೆ.

Previous articleನಮ್ಮ ಬೆರಳಚ್ಚು ಎಲ್ಲರದ್ದೂ ಬೇರೆ ಯಾಕೆ?
Next articleಶಿರಸಿ | ಅಜ್ಜಿಬಳ ಬಳಿ ಭೀಕರ ಬೈಕ್ ಅಪಘಾತ
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!