Monday, September 7, 2026
Join WhatsApp Group
HomeLocal Newsನದಿ ಉಳಿದರೆ ಬದುಕು ಉಳಿಯುತ್ತದೆ

ನದಿ ಉಳಿದರೆ ಬದುಕು ಉಳಿಯುತ್ತದೆ

ಪಶ್ಚಿಮ ಘಟ್ಟ ಉಳಿಸುವ ಸಂಕಲ್ಪಕ್ಕೆ ಮಾರುತಿ ಗುರೂಜಿ ಕರೆ

ಹೊನ್ನಾವರ: ನದಿ, ನೀರು ಮತ್ತು ಜೀವವೈವಿಧ್ಯ ಉಳಿದರೆ ಮಾತ್ರ ಮುಂದಿನ ಪೀಳಿಗೆಯ ಬದುಕು ಸುರಕ್ಷಿತವಾಗಿರಲು ಸಾಧ್ಯ. ಅಭಿವೃದ್ಧಿಯ ಹೆಸರಿನಲ್ಲಿ ಜೀವವೈವಿಧ್ಯದ ತಾಣವಾಗಿರುವ ಪಶ್ಚಿಮ ಘಟ್ಟದಲ್ಲಿ ನಡೆಯುವ ಅವೈಜ್ಞಾನಿಕ ಯೋಜನೆಗಳು ಇನ್ನೂ ಅಧ್ಯಯನವೇ ಆಗದ ಜೀವಸಂತತಿಗಳಿಗೂ ಅಪಾಯ ತಂದೊಡ್ಡಬಹುದು ಎಂದು ಪೂಜ್ಯ ಶ್ರೀ ಮಾರುತಿ ಗುರೂಜಿ ಎಚ್ಚರಿಸಿದರು.

ಪಶ್ಚಿಮ ಘಟ್ಟದ ಸಂರಕ್ಷಣೆಯ ಮಹಾಸಂಕಲ್ಪದೊಂದಿಗೆ ಚಾತುರ್ಮಾಸ್ಯ ವ್ರತ ಆರಂಭಿಸಿರುವ ಶ್ರೀ ಮಾರುತಿ ಗುರೂಜಿಯವರು ಪ್ರತಿ ಭಾನುವಾರ ಇದೇ ಆಶಯದಡಿ ವಿಚಾರ ಸಂಕಿರಣಗಳ ಸರಣಿ ಆಯೋಜಿಸುತ್ತಿದ್ದು, ಇದರ ಭಾಗವಾಗಿ ಆ.9ರಂದು ‘ನದಿ ಮತ್ತು ನೀರು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ’ ಎಂಬ ವಿಷಯದ ಕುರಿತ ಚಿಂತನ-ಮಂಥನದಲ್ಲಿ ಅವರು ಮಾತನಾಡಿದರು.

ಪರಿಸರ ಚಿಂತಕ ಶಿವಾನಂದ ಕಳವೆ ಮಾತನಾಡಿ, ನೀರಿದ್ದರೆ ನಾವಿರುತ್ತೇವೆ, ನೀರಿಲ್ಲದಿದ್ದರೆ ನಾವೂ ಇರುವುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ನೀರಿನ ನಿಜವಾದ ಮಹತ್ವ ಅರಿವಾಗುವುದು ಬರಗಾಲ ಬಂದಾಗ. ಮನುಷ್ಯ ತನ್ನ ಬದುಕಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ನೀರಿನ ಮೂಲಗಳು ನಾಶವಾದಾಗ ಅವಲಂಬಿಸಿರುವ ವನ್ಯಜೀವಿಗಳ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಗಂಭೀರವಾಗಿ ಚಿಂತಿಸಬೇಕಿದೆ ಎಂದು ಹೇಳಿದರು.

ಪ್ರಾದ್ಯಾಪಕ ಡಾ. ಗಿರೀಶ ಜನ್ನೆ ಮಾತನಾಡಿ, ಕೃಷಿ ಭೂಮಿಗಳು ಹಿಂದಿನ ಹಲವು ತಲೆಮಾರುಗಳಿಗೆ ಆರ್ಥಿಕ ಭದ್ರತೆ ನೀಡಿದ ಚಿನ್ನದ ಮೊಟ್ಟೆಯಿಡುವ ಕೋಳಿಯಂತಿವೆ. ಮುಂದಿನ ತಲೆಮಾರಿಗೂ ಇದೇ ಭದ್ರತೆ ದೊರೆಯಬೇಕಾದರೆ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದರು.

ಸರ್ಕಾರದ ಅವೈಜ್ಞಾನಿಕ ಯೋಜನೆಗಳು ಜಾರಿಯಾದಾಗ ಪರಿಹಾರ ನೀಡಬಹುದು. ಆದರೆ ಆ ಪರಿಹಾರ ಒಂದು ಕುಟುಂಬ ಅಥವಾ ಒಂದು ತಲೆಮಾರಿಗೆ ಮಾತ್ರ ನೆರವಾಗಬಹುದು. ಕಳೆದುಹೋದ ಕೃಷಿ ಭೂಮಿ, ಪರಿಸರ ಹಾಗೂ ಬದುಕಿನ ಮೂಲಸೌಕರ್ಯವನ್ನು ಹಣದಿಂದ ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಶರಾವತಿ ಕಣಿವೆಯಲ್ಲಿರುವ ಅಪಾರ ಗಿಡಮೂಲಿಕೆ ಸಂಪತ್ತಿನ ಬಗ್ಗೆಯೂ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲೇ ಇಲ್ಲಿನ ಗಿಡಮೂಲಿಕೆಗಳು ಕಳ್ಳಸಾಗಣೆ ಮೂಲಕ ಬೇರೆ ದೇಶಗಳನ್ನು ತಲುಪಿದ್ದವು. ಆದರೆ ನಮ್ಮಲ್ಲಿರುವ ನೈಸರ್ಗಿಕ ಸಂಪತ್ತನ್ನು ಸುಸ್ಥಿರವಾಗಿ ಬಳಸಿಕೊಳ್ಳುವ ಜ್ಞಾನ ಇನ್ನೂ ಸಮರ್ಪಕವಾಗಿ ಬೆಳೆದಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಯೋಜನಾ ನಿರಾಶ್ರಿತರೂ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ಸುಧಾಕರ ಕಟ್ಟೆಮನೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad
Ad
Ad

Most Popular

error: Content is protected !!
Share