ಶಿರಸಿ: ಕಬ್ಬಿಣದ ರಸ್ತೆ ಸೂಚನಾ ಫಲಕಗಳಿಗೂ ಕಳ್ಳರ ಕಣ್ಣು ಬಿದ್ದಿದೆ! ಆದರೆ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಕಳ್ಳತನದ ಯತ್ನ ವಿಫಲವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕುತೂಹಲದ ಸಂಗತಿಯೆಂದರೆ, ಜುಲೈ 18ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಜುಲೈ 23ರಂದು ಪ್ರಕರಣ ದಾಖಲಾಗಿದ್ದು, ಐದು ದಿನಗಳ ಬಳಿಕ FIR ದಾಖಲಾದದ್ದು ಗಮನ ಸೆಳೆದಿದೆ.
ಲೋಕೋಪಯೋಗಿ ಇಲಾಖೆಯ ಶಿರಸಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅರುಣ್ ಡಿ ಅವರು ನೀಡಿದ ದೂರಿನ ಪ್ರಕಾರ, ಜುಲೈ 18ರಂದು ರಾತ್ರಿ ಸುಮಾರು 10.30ರ ವೇಳೆಗೆ ಅಂದಳ್ಳಿ ರಸ್ತೆಯಿಂದ ಕಮಟಗೇರಿ ಕೂಡು ರಸ್ತೆ ಮೂಲಕ ಕಡವೆ–ಬೊಮ್ಮನಹಳ್ಳಿ ಮೂಲೆಮನೆ ರಸ್ತೆಯಲ್ಲಿ ಅಳವಡಿಸಲಾಗಿದ್ದ ಐದು ಕಬ್ಬಿಣದ ರಸ್ತೆ ಸೂಚನಾ ಫಲಕಗಳನ್ನು ದುಷ್ಕರ್ಮಿಗಳು ಕಳವು ಮಾಡಲು ಯತ್ನಿಸಿದ್ದಾರೆ.
ಸುಮಾರು ₹17,500 ಮೌಲ್ಯದ ಸೂಚನಾ ಫಲಕಗಳನ್ನು ಕಿತ್ತು, ಕೆಎ-05/ಎಂಬಿ-7407 ನೋಂದಣಿ ಸಂಖ್ಯೆಯ ಮಾರುತಿ ಓಮ್ನಿ ವ್ಯಾನ್ನಲ್ಲಿ ತುಂಬಿಕೊಳ್ಳುತ್ತಿದ್ದ ವೇಳೆ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿದ್ದಾರೆ. ಇದನ್ನು ಕಂಡ ಆರೋಪಿಗಳು ಫಲಕಗಳನ್ನು ವಾಹನದಲ್ಲೇ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ ಐದು ದಿನಗಳ ಬಳಿಕ, ಜುಲೈ 23ರಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ದೂರಿನ ಮೇರೆಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.