ಭಾರತೀಯ ರಾಜಕೀಯದಲ್ಲಿ ಕೆಲವು ವಿಷಯಗಳು ಕಾಲಕಾಲಕ್ಕೆ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕೂಡ ಅಂತಹ ಒಂದು ವಿಷಯ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆರ್ಎಸ್ಎಸ್ ವಿರುದ್ಧ ಟೀಕೆಗಳು ತೀವ್ರಗೊಂಡಿವೆ. ಕೆಲ ರಾಜಕೀಯ ನಾಯಕರು ಸಂಘವನ್ನು ನಿಷೇಧಿಸುವ ಮಾತುಗಳನ್ನೂ ಆಡುತ್ತಿದ್ದಾರೆ. ಆದರೆ ಪ್ರಶ್ನೆ ಏನೆಂದರೆ, ರಾಜಕೀಯ ವೇದಿಕೆಯಲ್ಲಿ ಹೇಳಿದ ಮಾತ್ರಕ್ಕೆ ಆರ್ಎಸ್ಎಸ್ನಂತಹ ಬೃಹತ್ ಸಂಘಟನೆಯನ್ನು ನಿಷೇಧಿಸಲು ಸಾಧ್ಯವೇ? ಅಥವಾ ಅದಕ್ಕೆ ಕಾನೂನು ಚೌಕಟ್ಟಿನೊಳಗಿನ ಕಟ್ಟುನಿಟ್ಟಾದ ಪ್ರಕ್ರಿಯೆಗಳಿವೆಯೇ?
ಈ ಪ್ರಶ್ನೆಗೆ ಉತ್ತರ ಹುಡುಕಿದಾಗ, ರಾಜಕೀಯ ಹೇಳಿಕೆಗಳಿಗಿಂತಲೂ ಭಾರತದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯೇ ಹೆಚ್ಚು ಮಹತ್ವ ಪಡೆಯುತ್ತದೆ.
ಭಾರತದಲ್ಲಿ ಯಾವುದೇ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ಮುಖ್ಯವಾಗಿ ಕೇಂದ್ರ ಸರ್ಕಾರಕ್ಕಿದೆ. ಆದರೆ ಅದು ಮನಸ್ಸಿಗೆ ಬಂದಂತೆ ಕೈಗೊಳ್ಳಬಹುದಾದ ಕ್ರಮವಲ್ಲ. ದೇಶದ ಭದ್ರತೆ, ಸಾರ್ವಭೌಮತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಗಂಭೀರ ಕಾರಣಗಳಿದ್ದಾಗ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಬಹುದು.
ಇದಕ್ಕಾಗಿ ಸಾಮಾನ್ಯವಾಗಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (Unlawful Activities Prevention Act – UAPA) ಬಳಸಲಾಗುತ್ತದೆ. ಈ ಕಾಯ್ದೆಯಡಿ ಯಾವುದೇ ಸಂಘಟನೆಯನ್ನು “ಕಾನೂನುಬಾಹಿರ ಸಂಘಟನೆ” ಎಂದು ಘೋಷಿಸಲು ಸರ್ಕಾರವು ಅದರ ವಿರುದ್ಧ ಸ್ಪಷ್ಟವಾದ ಸಾಕ್ಷ್ಯಗಳನ್ನು ಒದಗಿಸಬೇಕಾಗುತ್ತದೆ.
ಸಂಘಟನೆ ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುತ್ತಿದೆ, ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿದೆ ಅಥವಾ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದನ್ನು ದೃಢಪಡಿಸದೆ ಕೇವಲ ರಾಜಕೀಯ ಭಿನ್ನಾಭಿಪ್ರಾಯದ ಕಾರಣಕ್ಕೆ ನಿಷೇಧ ಹೇರಲು ಸಾಧ್ಯವಿಲ್ಲ.
ಭಾರತೀಯ ಸಂವಿಧಾನದಲ್ಲಿ ನಾಗರಿಕರಿಗೆ ಸಂಘಟನೆಗಳು ಮತ್ತು ಸಂಘಗಳನ್ನು ರಚಿಸುವ ಮೂಲಭೂತ ಹಕ್ಕನ್ನು ನೀಡಿದೆ. ಇದು ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಹಕ್ಕುಗಳಲ್ಲಿ ಒಂದು.
ಹೌದು, ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗುವ ಸಂದರ್ಭಗಳಲ್ಲಿ ಸರ್ಕಾರ ಈ ಹಕ್ಕಿನ ಮೇಲೆ ನಿರ್ಬಂಧ ಹೇರಬಹುದು. ಆದರೆ ಅಂತಹ ನಿರ್ಬಂಧವು ನ್ಯಾಯಾಲಯದ ಪರಿಶೀಲನೆಗೆ ಒಳಪಡುತ್ತದೆ. ಸರ್ಕಾರದ ನಿರ್ಧಾರವನ್ನು ನ್ಯಾಯಾಂಗ ಪರಿಶೀಲಿಸಬಹುದು ಮತ್ತು ಅಗತ್ಯವಿದ್ದರೆ ರದ್ದುಗೊಳಿಸಬಹುದು.
ಹೀಗಾಗಿ ಯಾವುದೇ ಸಂಘಟನೆಯನ್ನು ನಿಷೇಧಿಸುವುದು ಕೇವಲ ರಾಜಕೀಯ ನಿರ್ಧಾರವಲ್ಲ. ಅದು ಕಾನೂನು ಮತ್ತು ನ್ಯಾಯಾಂಗದ ಪರೀಕ್ಷೆಗಳನ್ನು ಎದುರಿಸಬೇಕಾದ ಪ್ರಕ್ರಿಯೆಯಾಗಿದೆ. ಭಾರತದ ಇತಿಹಾಸದಲ್ಲಿ ಆರ್ಎಸ್ಎಸ್ ಮೇಲೆ ಮೂರು ಬಾರಿ ನಿಷೇಧ ಹೇರಲಾಗಿದೆ.
ಮೊದಲ ಬಾರಿಗೆ 1948ರಲ್ಲಿ ಮಹಾತ್ಮ ಗಾಂಧೀಜಿ ಹತ್ಯೆಯ ನಂತರ ಸಂಘವನ್ನು ನಿಷೇಧಿಸಲಾಯಿತು. ಆದರೆ ನಂತರ ನಡೆದ ತನಿಖೆಗಳಲ್ಲಿ ಗಾಂಧೀಜಿ ಹತ್ಯೆ ಸಂಚಿನಲ್ಲಿ ಸಂಘಟನೆಯ ನೇರ ಪಾತ್ರ ಸಾಬೀತಾಗದ ಹಿನ್ನೆಲೆಯಲ್ಲಿ ನಿಷೇಧ ತೆರವುಗೊಳಿಸಲಾಯಿತು.
ಎರಡನೇ ಬಾರಿ 1975ರಲ್ಲಿ ಇಂದಿರಾ ಗಾಂಧಿ ಘೋಷಿಸಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರ್ಎಸ್ಎಸ್ ಸೇರಿದಂತೆ ಹಲವು ಸಂಘಟನೆಗಳನ್ನು ನಿಷೇಧಿಸಲಾಯಿತು. 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಈ ನಿಷೇಧ ರದ್ದುಗೊಂಡಿತು.
ಮೂರನೇ ಬಾರಿ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ಕೇಂದ್ರ ಸರ್ಕಾರ ಸಂಘದ ಮೇಲೆ ನಿಷೇಧ ಹೇರಿತು. ಆದರೆ ನಂತರ ನಡೆದ ಪರಿಶೀಲನೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಬಳಿಕ ಆ ನಿಷೇಧವೂ ಹಿಂತೆಗೆದುಕೊಳ್ಳಲಾಯಿತು.
ಇತಿಹಾಸದ ಈ ಮೂರು ಉದಾಹರಣೆಗಳು ಒಂದು ಸಂಗತಿಯನ್ನು ಸ್ಪಷ್ಟಪಡಿಸುತ್ತವೆ. ನಿಷೇಧ ಹೇರಿದಷ್ಟೇ ಸುಲಭವಲ್ಲ, ಅದನ್ನು ನ್ಯಾಯಸಮ್ಮತವಾಗಿ ಉಳಿಸಿಕೊಳ್ಳುವುದು ಇನ್ನಷ್ಟು ಕಷ್ಟ!
ಪ್ರಸ್ತುತ ಆರ್ಎಸ್ಎಸ್ ದೇಶದ ಅತಿದೊಡ್ಡ ಸ್ವಯಂಸೇವಕ ಸಂಘಟನೆಗಳಲ್ಲೊಂದು. ಲಕ್ಷಾಂತರ ಸದಸ್ಯರನ್ನು ಹೊಂದಿರುವ ಈ ಸಂಘಟನೆ ದೇಶದ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ನಡೆಸುತ್ತಿದೆ. ಶಿಕ್ಷಣ, ಸೇವಾ ಚಟುವಟಿಕೆ, ಗ್ರಾಮೀಣ ಅಭಿವೃದ್ಧಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅದರ ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ ಆರ್ಎಸ್ಎಸ್ನ್ನು ನಿಷೇಧಿಸಬೇಕಾದರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಂಘದ ನೇರ ಪಾತ್ರವಿದೆ ಎಂಬುದನ್ನು ದೃಢವಾದ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸಬೇಕಾಗುತ್ತದೆ. ಆ ಸಾಕ್ಷ್ಯಗಳು ನ್ಯಾಯಾಂಗದ ಪರಿಶೀಲನೆಯನ್ನೂ ತೇರ್ಗಡೆಯಾಗಬೇಕು.
ಆದ್ದರಿಂದ ಇಂದಿನ ಸಂದರ್ಭದಲ್ಲಿ ಆರ್ಎಸ್ಎಸ್ ನಿಷೇಧದ ಕುರಿತು ಕೇಳಿಬರುವ ರಾಜಕೀಯ ಹೇಳಿಕೆಗಳು ಕಾನೂನು ಪ್ರಕ್ರಿಯೆಯ ದೃಷ್ಟಿಯಿಂದ ನೋಡಿದರೆ ಅಷ್ಟು ಸರಳವಾದ ವಿಷಯವೇನಲ್ಲ!
ಯಾವುದೇ ಸಂಘಟನೆ ಅಥವಾ ಅದರ ಸಿದ್ಧಾಂತವನ್ನು ವಿರೋಧಿಸುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಒಂದು ಸಂಘಟನೆಯ ಚಿಂತನೆಗಳನ್ನು ಟೀಕಿಸುವುದು, ಅದರ ವಿರುದ್ಧ ರಾಜಕೀಯ ಹೋರಾಟ ನಡೆಸುವುದು ಅಥವಾ ಸಾರ್ವಜನಿಕ ಚರ್ಚೆ ಮಾಡುವುದು ಪ್ರಜಾಪ್ರಭುತ್ವದ ಭಾಗವೇ ಆಗಿದೆ.
ಆರ್ಎಸ್ಎಸ್ನ್ನು ನಿಷೇಧಿಸುತ್ತೇವೆ ಎಂಬ ರಾಜಕೀಯ ಘೋಷಣೆಗಳು ಸಾರ್ವಜನಿಕರ ಗಮನ ಸೆಳೆಯಬಹುದು. ಆದರೆ ಭಾರತದ ಕಾನೂನು ವ್ಯವಸ್ಥೆಯಲ್ಲಿ ಯಾವುದೇ ಸಂಘಟನೆಯನ್ನು ನಿಷೇಧಿಸುವುದರ ಅದರ ಹಿಂದೆ ಸಾಕ್ಷ್ಯ, ಕಾನೂನು, ನ್ಯಾಯಾಂಗ ಮತ್ತು ಸಂವಿಧಾನದ ಸಂಕೀರ್ಣ ಪ್ರಕ್ರಿಯೆಗಳಿವೆ. ಇದೇ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ತತ್ವ!
– ದೇಶಭಕ್ತ.