2 ವರ್ಷಗಳಲ್ಲಿ 535 ರೈತರ ಸಾವು | ಕರ್ನಾಟಕ ಬದಲಾದರಷ್ಟೇ ಭವಿಷ್ಯ
ರಾಜಸ್ಥಾನದಲ್ಲಿ ಕೀಟನಾಶಕಗಳ ತೀವ್ರ ಬಳಕೆ ಮತ್ತು ಅಸುರಕ್ಷಿತ ಸಿಂಪಡಣೆಯಿಂದಾಗಿ ಕಳೆದ ಎರಡು ವರ್ಷಗಳಲ್ಲಿ (ಜನವರಿ 2024ರಿಂದ ಜನವರಿ 2026ರವರೆಗೆ) 535 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜಸ್ಥಾನ ವಿಧಾನಸಭೆಯಲ್ಲಿ ಮಂಡಿಸಲಾದ ಅಧಿಕೃತ ವರದಿಗಳು ತಿಳಿಸಿವೆ. ಕೃಷಿ ವಲಯದಲ್ಲಿ ರಾಸಾಯನಿಕಗಳ ಅತಿಯಾದ ಅವಲಂಬನೆ ಮತ್ತು ರಕ್ಷಣಾ ಕವಚಗಳ ಕೊರತೆಯೇ ಈ ದುರಂತಕ್ಕೆ ಪ್ರಮುಖ ಕಾರಣ.
ಭಾರತದ ಕೃಷಿ ವಲಯದಲ್ಲಿ ಕೀಟನಾಶಕಗಳ ಅತಿಯಾದ ಮತ್ತು ಅಸಮರ್ಪಕ ಬಳಕೆ ರೈತರ ಜೀವಕ್ಕೆ ಕಂಟಕವಾಗುತ್ತಿದೆ. ಇದಕ್ಕೆ ಇತ್ತೀಚಿನ ಸ್ಪಷ್ಟ ಉದಾಹರಣೆ ರಾಜಸ್ಥಾನ. ಕೇವಲ ಎರಡೇ ವರ್ಷಗಳಲ್ಲಿ ಅಲ್ಲಿನ ಕೀಟನಾಶಕಗಳ ವಿಷಕಾರಿ ಪ್ರಭಾವದಿಂದಾಗಿ 535 ರೈತರು ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ತೀವ್ರ ಕೃಷಿ ಪ್ರದೇಶಗಳಲ್ಲೇ ಈ ಸಾವುಗಳು ಹೆಚ್ಚು ವರದಿಯಾಗಿವೆ. ಅಧಿಕೃತ ಮಾಹಿತಿಯ ಪ್ರಕಾರ ಬಿಕಾನೇರ್-57 ಸಾವು, ಚುರು-56 ಸಾವು, ಹನುಮಾನ್‌ಗಢ: 42 ಸಾವು, ಝಾಲಾವರ್-42 ಸಾವು, ಜೋಧ್‌ಪುರ-38 ಸಾವು, ಶ್ರೀಗಂಗಾನಗರ-31 ಸಾವುಗಳು ಸಂಭವಿಸಿವೆ.
ರಾಜಸ್ಥಾನದ ಕೃಷಿ ಇಲಾಖೆ ನಡೆಸಿದ ತನಿಖೆಯಲ್ಲಿ ರೈತರ ಸಾವಿಗೆ ಕೆಲವು ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲಾಗಿದೆ.
ಕಳಪೆ ಗುಣಮಟ್ಟದ ಕೀಟನಾಶಕಗಳು-ಮಾರುಕಟ್ಟೆಯಲ್ಲಿ ಸಿಗುವ ಕೀಟನಾಶಕಗಳ ಗುಣಮಟ್ಟ ತಪಾಸಣೆ ನಡೆಸಿದಾಗ 189 ಮಾದರಿಗಳು ಕಳಪೆಯಾಗಿರುವುದು ಪತ್ತೆಯಾಗಿದೆ. ಇದರಲ್ಲಿ 114 ಮಾದರಿಗಳು ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿದ್ದವು.
ಸುರಕ್ಷತಾ ಸಲಕರಣೆಗಳ ಕೊರತೆ-ರೈತರು ಮತ್ತು ಕೃಷಿ ಕಾರ್ಮಿಕರು ಹೊಲಗಳಲ್ಲಿ ಕೀಟನಾಶಕ ಸಿಂಪಡಿಸುವಾಗ ಮಾಸ್ಕ್ (Mask), ಕೈಗವಸು (Gloves) ಅಥವಾ ರಕ್ಷಣಾತ್ಮಕ ಉಡುಪುಗಳನ್ನು (PPE Kits) ಧರಿಸುತ್ತಿಲ್ಲ. ಇದರಿಂದಾಗಿ ರಾಸಾಯನಿಕಗಳು ನೇರವಾಗಿ ಉಸಿರಾಟದ ಮೂಲಕ ಹಾಗೂ ಚರ್ಮದ ಮೂಲಕ ದೇಹವನ್ನು ಪ್ರವೇಶಿಸುತ್ತಿವೆ.
ಅಸಮರ್ಪಕ ಸಿಂಪಡಣಾ ವಿಧಾನ-ಗಾಳಿ ಬೀಸುವ ದಿಕ್ಕನ್ನು ಗಮನಿಸದೆ ಸಿಂಪಡಿಸುವುದು ಮತ್ತು ಒಂದಕ್ಕಿಂತ ಹೆಚ್ಚು ಕೀಟನಾಶಕಗಳನ್ನು ಒಟ್ಟಿಗೆ ಬೆರೆಸಿ ತೀವ್ರ ವಿಷಕಾರಿ ಮಿಶ್ರಣ ಮಾಡುವುದರಿಂದ ತಕ್ಷಣದ ಆರೋಗ್ಯ ಏರುಪೇರಾಗುತ್ತಿದೆ.
ತಕ್ಷಣದ ಲಕ್ಷಣಗಳು-ತಲೆತಿರುಗುವಿಕೆ, ತೀವ್ರ ತಲೆನೋವು, ವಾಂತಿ, ಉಸಿರಾಟದ ತೊಂದರೆ ಮತ್ತು ಕಣ್ಣು-ಚರ್ಮದ ಉರಿತ.
ದೀರ್ಘಕಾಲದ ಕಾಯಿಲೆಗಳು-ಕೀಟನಾಶಕಗಳ ನಿರಂತರ ಸಂಪರ್ಕದಿಂದಾಗಿ ಕ್ಯಾನ್ಸರ್, ಹಾರ್ಮೋನ್ ಅಸಮತೋಲನ, ಗರ್ಭಿಣಿಯರಲ್ಲಿ ಭ್ರೂಣದ ಮೇಲಿನ ದೋಷಗಳು ಮತ್ತು ಪಾರ್ಕಿನ್ಸನ್‌ನಂತಹ ನರರೋಗಗಳು ಕಾಣಿಸಿಕೊಳ್ಳುತ್ತಿವೆ.
ಮೃತ ರೈತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯಡಿ ಒಟ್ಟು ₹5.10 ಕೋಟಿ ಪರಿಹಾರ ಧನವನ್ನು ವಿತರಿಸಲಾಗಿದೆ.
ಕಳಪೆ ಕೀಟನಾಶಕ ಮಾರಾಟ ಮಾಡಿದ ವಿತರಕರು ಮತ್ತು ಕಂಪನಿಗಳ ವಿರುದ್ಧ ಕೃಷಿ ಇಲಾಖೆ ಕಾನೂನು ಕ್ರಮ ಜರುಗಿಸುತ್ತಿದೆ.
ಕೀಟನಾಶಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ರೈತರು ತಮ್ಮ ಜಮೀನಿನ ಕನಿಷ್ಠ ಶೇ. 25ರಷ್ಟು ಭಾಗದಲ್ಲಾದರೂ ಕಡ್ಡಾಯವಾಗಿ ಸಾವಯವ ಕೃಷಿ (Organic Farming) ಮಾಡುವಂತೆ ಸರ್ಕಾರ ಜಾಗೃತಿ ಮೂಡಿಸುತ್ತಿದೆ.
ಕೀಟನಾಶಕಗಳು ಬೆಳೆಗಳನ್ನು ರಕ್ಷಿಸಬಹುದು, ಆದರೆ ರೈತರ ಜೀವಕ್ಕಿಂತ ಯಾವುದೂ ದೊಡ್ಡದಲ್ಲ. ಸುರಕ್ಷಿತ ಕೃಷಿ ಪದ್ಧತಿಗಳು, ಕಡ್ಡಾಯವಾಗಿ ಪಿಪಿಇ (PPE) ಕಿಟ್‌ಗಳ ಬಳಕೆ ಮತ್ತು ಸಾವಯವ ಕೃಷಿಯತ್ತ ಹೆಜ್ಜೆ ಇಡುವುದೊಂದೇ ಈ ಮಾರಣಹೋಮಕ್ಕೆ ಶಾಶ್ವತ ಪರಿಹಾರ.
ಈಗ, ನಿಜವಾಗಿ ವಿಚಾರ ಮಾಡಬೇಕಾದ ಸರದಿ ಕರ್ನಾಟಕದ್ದು. ಇಲ್ಲಿನ ಪರಿಸ್ಥಿತಿ ರಾಜಸ್ಥಾನಕ್ಕಿಂತ ಬೇರೆಯಾಗಿದೆಯಾ? ನಮ್ಮ ಭವಿಷ್ಯದ ಆರೋಗ್ಯದ ಕಥೆಯೇನು? ಕೇವಲ ಆಸ್ಪತ್ರೆ, ವೈದ್ಯಕೀಯ ಕ್ಷೇತ್ರದವರನ್ನು, ವಿಷವನ್ನೇ ಮಾರಿ ದುಡ್ಡು ಗಳಿಸುವವರನ್ನಷ್ಟೇ ಬೆಳೆಸುತ್ತಿದ್ದೇವಾ…
– ಸಂಗೀತಾ ಭಟ್, ಮಾಗೋಡು.