ಸಿದ್ದಾಪುರ: ಜೀವ ಬೆದರಿಕೆ, ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಜ್ಜೂರು ನಿವಾಸಿ ಹಪಿಜುಲ್ಲಾ ತಂದೆ ಖಾದರ್ ಖಾನ್ (56) ಅವರು ನೀಡಿದ ದೂರಿನ ಆಧಾರದ ಮೇಲೆ ರಿಯಾಜ್ ಶೇಖ್ ಬಾಷಾ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರರ ಪ್ರಕಾರ, ಏಪ್ರಿಲ್ 13ರಂದು ರಾತ್ರಿ ತಮ್ಮ ಮೊಮ್ಮಕ್ಕಳು ಮನೆಯ ಮುಂದೆ ನೀರಿನ ಆಟ ಆಡುತ್ತಿದ್ದ ವೇಳೆ ಆರೋಪಿತನಿಗೆ ನೀರು ತಾಗಿದ್ದ ಹಿನ್ನೆಲೆಯಲ್ಲಿ ಆತ ಸಿಟ್ಟುಗೊಂಡಿದ್ದ. ಬಳಿಕ ಮನೆಗೆ ಅಕ್ರಮ ಪ್ರವೇಶ ಮಾಡಿ ದೂರುದಾರ ಮತ್ತು ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಾದ ಬಳಿಕ ತನ್ನ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ಸಿಟ್ಟುಗೊಂಡ ಆರೋಪಿತನು, ಮೇ 8ರಂದು ರಾತ್ರಿ ದೂರುದಾರರ ಮನೆ ಬಳಿ ಬಂದು ಬಾಗಿಲು ಒದ್ದು “ಹೊರಗೆ ಬಾ, ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಲ್ಲದೆ ಮನೆ ಮತ್ತು ಅಂಗಡಿಗೆ ಪೆಟ್ರೋಲ್ ಸುರಿದು ಸುಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೇ 9ರಂದು ಬೆಳಿಗ್ಗೆ ದೂರುದಾರರು ತಮ್ಮ ಮಗನ ಅಂಗಡಿಯಲ್ಲಿ ಇದ್ದ ವೇಳೆ ಆರೋಪಿತನು ಬೈಕ್‌ನಲ್ಲಿ ಬಂದು ಮಟನ್ ಕತ್ತರಿಸುವ ಕತ್ತಿ ಹಾಗೂ ಮಾರಕಾಸ್ತ್ರ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಆರೋಪಿತನು ಎಸೆದ ಕತ್ತಿಯಿಂದ ತಪ್ಪಿಸಿಕೊಂಡಿದ್ದು, ಅದು ಅಂಗಡಿಯ ಗಾಜಿಗೆ ತಾಗಿದೆ.
ಅಲ್ಲದೆ, ಆರೋಪಿತನು ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.