Saturday, September 19, 2026
Join WhatsApp Group
HomeCrime22 ಚೀಲಗಳಲ್ಲಿತ್ತು 'ಅನ್ನಭಾಗ್ಯ'ದ ರಹಸ್ಯ!

22 ಚೀಲಗಳಲ್ಲಿತ್ತು ‘ಅನ್ನಭಾಗ್ಯ’ದ ರಹಸ್ಯ!

ದಾಳಿ ನಡೆಸುತ್ತಿದ್ದಂತೆ ಅಕ್ಕಿ ಬಿಟ್ಟು ಪರಾರಿಯಾದ ಆರೋಪಿ

ಶಿರಸಿ: ರಾತ್ರಿ ಕತ್ತಲು ಆವರಿಸುತ್ತಿದ್ದ ಸಮಯ, ಮನೆಯ ಮುಂದೆ ರಾಶಿಯಾಗಿ ಇಟ್ಟಿದ್ದ ಅಕ್ಕಿ ಚೀಲಗಳು, ಅಧಿಕಾರಿಗಳ ಹೆಜ್ಜೆ ಸದ್ದು ಕೇಳುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತ ವ್ಯಕ್ತಿ… ಸ್ಥಳದಲ್ಲೇ ಉಳಿದಿದ್ದದ್ದು 22 ಚೀಲಗಳ ಸರ್ಕಾರಿ ಅನ್ನಭಾಗ್ಯ ಅಕ್ಕಿ!

ಇಂತಹ ಅನುಮಾನಾಸ್ಪದ ಬೆಳವಣಿಗೆ ಶಿರಸಿಯಲ್ಲಿ ಬೆಳಕಿಗೆ ಬಂದಿದ್ದು, ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಗೆ ಸಾಗಿಸಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ.

ಆಹಾರ ನಿರೀಕ್ಷಕಿ ಕವಿತಾ ಎಸ್. ಪಾಟಣಕರ ನೀಡಿದ ದೂರಿನ ಮೇರೆಗೆ, ಶಿರಸಿಯ ಸೂಪಾ ಸರ್ಕಲ್ ಸಮೀಪದ ಕಸ್ತೂರಬಾ ನಗರದ ನಿವಾಸಿ ಅಬ್ದುಲ್ ಕರಿಂ (48) ವಿರುದ್ಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 25ರಂದು ರಾತ್ರಿ 10 ಗಂಟೆ ಸುಮಾರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ, ಆರೋಪಿಯ ಮನೆಯ ಮುಂದೆ 22 ಚೀಲಗಳಲ್ಲಿ ಸಂಗ್ರಹಿಸಲಾಗಿದ್ದ 1,073 ಕೆ.ಜಿ. (10 ಕ್ವಿಂಟಲ್ 73 ಕೆ.ಜಿ.) ಅನ್ನಭಾಗ್ಯ ಯೋಜನೆಯ ಅಕ್ಕಿ ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ ₹36,482 ಎಂದು ತಿಳಿಸಲಾಗಿದೆ.

ಈ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಂದ ಅಕ್ರಮವಾಗಿ ಸಂಗ್ರಹಿಸಿ, ಯಾವುದೇ ಅಧಿಕೃತ ಪರವಾನಿಗೆ ಪಡೆಯದೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದ ಮಾಹಿತಿ ಸಿಗುತ್ತಿದ್ದಂತೆಯೇ ಆರೋಪಿಯು 22 ಚೀಲಗಳ ಅಕ್ಕಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಸರ್ಕಾರದ ಬಡವರ ಪಾಲಿನ ಅನ್ನಭಾಗ್ಯ ಅಕ್ಕಿ ಕಾಳಸಂತೆಯ ಜಾಲಕ್ಕೆ ಸೇರುವ ಮುನ್ನವೇ ಅಧಿಕಾರಿಗಳ ಕಾರ್ಯಾಚರಣೆಯಿಂದ ಪತ್ತೆಯಾಗಿದ್ದು, ಈ ಅಕ್ಕಿ ಯಾರಿಂದ ಸಂಗ್ರಹಿಸಲಾಗಿತ್ತು, ಇದರ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆ ತನಿಖೆ ಮುಂದುವರಿಸಿದ್ದಾರೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad
Ad

Most Popular

error: Content is protected !!
Share