Sunday, July 26, 2026
Join WhatsApp Group
HomeLocal Storyರಾಜ್ಯ ಮಟ್ಟದಲ್ಲಿ ಮಿಂಚಿದ ಯಲ್ಲಾಪುರದ ಕುವರಿ

ರಾಜ್ಯ ಮಟ್ಟದಲ್ಲಿ ಮಿಂಚಿದ ಯಲ್ಲಾಪುರದ ಕುವರಿ

ಕಳಚೆಯ ದಿಶಾ ಪ್ರಮೋದ ಹೆಬ್ಬಾರ್ಗೆಕನ್ನಡ ಕುವರಿಪ್ರಶಸ್ತಿ

ಯಲ್ಲಾಪುರ/ದಾವಣಗೆರೆ: ಪ್ರತಿಭೆಗೆ ನಗರ-ಗ್ರಾಮ ಎಂಬ ಗಡಿಯಿಲ್ಲ. ಮಹಾನಗರದ ಖಾಸಗಿ ಶಾಲೆಗಳಲ್ಲಿ ಓದಿದರಷ್ಟೇ ಸಾಧನೆ ಮಾಡಬಹುದು ಎಂಬ ಕಲ್ಪನೆಯನ್ನು ಮುರಿದು, ಗ್ರಾಮೀಣ ಶಾಲೆಯಲ್ಲೇ ಕಲಿತು ರಾಜ್ಯಮಟ್ಟದ ಗೌರವ ತನ್ನದಾಗಿಸಿಕೊಂಡಿರುವ ಯಲ್ಲಾಪುರ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿನಿ ದಿಶಾ ಪ್ರಮೋದ ಹೆಬ್ಬಾರ್ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.

2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸಾಧನೆಯನ್ನು ಗುರುತಿಸಿ, ದಾವಣಗೆರೆಯ ಪ್ರತಿಷ್ಠಿತ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಅವರಿಗೆ “ಕನ್ನಡ ಕುವರಿ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ದಾವಣಗೆರೆಯ ಶಾಮನೂರು ಶಿವಶಂಕರಪ್ಪ–ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ದಿಶಾ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕಿರೀಟ ಧರಿಸಿ, ಪುಷ್ಪವೃಷ್ಟಿಯ ನಡುವೆ ಪ್ರಶಸ್ತಿ ಪ್ರದಾನಗೊಂಡ ಕ್ಷಣ, ಯಲ್ಲಾಪುರದ ಪಾಲಿಗೆ ಹೆಮ್ಮೆಯ ಕ್ಷಣವಾಗಿತ್ತು.

ಕಳೆದ 36 ವರ್ಷಗಳಿಂದ ರಾಜ್ಯದಾದ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಇದುವರೆಗೆ ಸುಮಾರು 39 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರಗಳನ್ನು ನೀಡುವ ಸಂಪ್ರದಾಯವನ್ನು ಸಂಸ್ಥೆ ಮುಂದುವರಿಸಿಕೊಂಡು ಬಂದಿದೆ.

ಈ ಸಾಲಿನಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 120ರಿಂದ 124 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೀಡುವ “ಕನ್ನಡ ಕುವರಿ” ಪ್ರಶಸ್ತಿಗೆ ದಿಶಾ ಹೆಬ್ಬಾರ್ ಆಯ್ಕೆಯಾಗಿರುವುದು ಯಲ್ಲಾಪುರ ತಾಲೂಕಿಗೆ ವಿಶೇಷ ಹೆಮ್ಮೆ ತಂದಿದೆ.

ದಿಶಾ ಅವರ ಸಾಧನೆಯ ಹಿಂದೆ ಅವರ ಪಾಲಕರ ದೂರದೃಷ್ಟಿಯ ನಿರ್ಧಾರವೂ ಅಡಗಿದೆ. ಏಳನೇ ತರಗತಿಯಲ್ಲಿ ತಮ್ಮ ಊರಿನ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಬಳಿಕ, “ಇನ್ನು ಯಾವ ದೊಡ್ಡ ಶಾಲೆಗೆ ಸೇರಿಸುತ್ತೀರಿ?” ಎಂಬ ಪ್ರಶ್ನೆ ಹಲವರಿಂದ ಎದುರಾದರೂ, ದೂರದ ಪ್ರತಿಷ್ಠಿತ ಶಾಲೆಗಳತ್ತ ಮುಖ ಮಾಡದೆ ಸ್ಥಳೀಯ ವಜ್ರಳ್ಳಿ ಸರ್ವೋದಯ ಪ್ರೌಢಶಾಲೆಯನ್ನೇ ಆಯ್ಕೆ ಮಾಡಲಾಯಿತು.

ಈ ಕುರಿತು ದಿಶಾ ಅವರ ಪಾಲಕರು, ಶಿಕ್ಷಣ ಎಂದರೆ ಕೇವಲ ದೊಡ್ಡ ಕಟ್ಟಡ ಅಥವಾ ಬ್ರ್ಯಾಂಡ್ ಅಲ್ಲ. ಸಂಸ್ಕಾರ, ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವ ಸ್ಥಳವೇ ನಿಜವಾದ ಶಾಲೆ. ಅಂದು ನಮ್ಮ ನಿರ್ಧಾರವನ್ನು ಕೆಲವರು ಟೀಕಿಸಿದ್ದರೂ, ಇಂದು ಅದೇ ನಿರ್ಧಾರ ನಮ್ಮ ಮಗಳ ಸಾಧನೆಯಾಗಿ ರೂಪುಗೊಂಡಿದೆ” ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ದಿಶಾಗೆ ನೀಡಲಾದ ಪ್ರಶಸ್ತಿ ಪತ್ರದಲ್ಲೂ ಅವರ ಸಾಧನೆಯನ್ನು ವಿಶೇಷವಾಗಿ ಶ್ಲಾಘಿಸಲಾಗಿದೆ. ಪ್ರಥಮ ಭಾಷೆ ಕನ್ನಡದಲ್ಲಿ ಅತ್ಯಧಿಕ ಅಂಕ ಪಡೆದು ನಿಮ್ಮ ಹೆತ್ತವರಿಗೆ, ವ್ಯಾಸಂಗ ಮಾಡಿದ ಶಾಲೆಗೆ ಹಾಗೂ ಊರಿಗೆ ಹೆಸರು ತಂದಿದ್ದೀರಿ. ಇದು ಕೇವಲ ನಿಮ್ಮ ಸಾಧನೆಯ ಮೊದಲ ಮೆಟ್ಟಿಲಷ್ಟೇ. ಇಷ್ಟಕ್ಕೇ ನಿಮ್ಮ ಸಾಧನೆ ನಿಲ್ಲದಿರಲಿ. ಮುಂದಿನ ದಿನಗಳಲ್ಲಿ ಆದರ್ಶ ವಿದ್ಯಾರ್ಥಿನಿಯಾಗಿ, ಸಂಸ್ಕಾರದೊಂದಿಗೆ ನಮ್ಮ ನಾಡು-ನುಡಿಯ ಕೀರ್ತಿಯನ್ನು ವಿಶ್ವದಾದ್ಯಂತ ಹರಡುವ ಹೊಂಗನಸು ನಿಮ್ಮದಾಗಲಿ” ಎಂದು ಸಂಸ್ಥೆ ಶುಭ ಹಾರೈಸಿದೆ.

ದಿಶಾ ಹೆಬ್ಬಾರ್ ಅವರ ಸಾಧನೆಗೆ ಸರ್ವೋದಯ ಪ್ರೌಢಶಾಲೆಯ ಶಿಕ್ಷಕರು, ಸಹಪಾಠಿಗಳು, ಪಾಲಕರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರತಿಭೆ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ರಾಜ್ಯಮಟ್ಟದ ಗೌರವ ಗಳಿಸಿರುವುದು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದೆ.

ಯಲ್ಲಾಪುರದಂತಹ ಪುಟ್ಟ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಈ ಪ್ರತಿಭೆ ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಸಾಮರ್ಥ್ಯ ಪ್ರದರ್ಶಿಸಿ ಮತ್ತಷ್ಟು ಸಾಧನೆ ಮಾಡಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Canara Next
Canara Next
ಕಳೆದ 15 ವರ್ಷಗಳಿಂದ ಕನ್ನಡದ ಹಲವು ದಿನಪತ್ರಿಕೆಗಳಲ್ಲಿ ವರದಿಗಾರನಾಗಿ, ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿರುವ ಸತೀಶ್‌ ಮಾಗೋಡು, ಸದ್ಯ ಫ್ರೀಲಾನ್ಸ್‌ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನ, ಸೈಬರ್‌ ಕ್ರೈಂ ಜಾಗೃತಿಯ ನೂರಾರು ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಯಾವುದೇ ವಿಷಯವಾದರೂ ಓದುಗರ ಮನ ಮುಟ್ಟುವಂತೆ ಪ್ರಸ್ತುತಪಡಿಸುವುದು ಇವರ ವಿಶೇಷತೆ. ಪ್ರಸ್ತುತ, ಕೆನರಾ ನೆಕ್ಸ್ಟ್‌ ನ್ಯೂಸ್‌ ಪೋರ್ಟಲ್‌ನ ಪ್ರಧಾನ ಸಂಪದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share