Friday, July 24, 2026
Join WhatsApp Group
HomeCrimeವೈದ್ಯರ ಹ*ತ್ಯೆ ನಡೆಸಿದ ಆರೋಪಿ ವಶಕ್ಕೆ: ಎಸ್ಪಿ ದೀಪನ್ ಎಂ.ಎನ್ ಮಾಹಿತಿ

ವೈದ್ಯರ ಹ*ತ್ಯೆ ನಡೆಸಿದ ಆರೋಪಿ ವಶಕ್ಕೆ: ಎಸ್ಪಿ ದೀಪನ್ ಎಂ.ಎನ್ ಮಾಹಿತಿ

ಶಿರಸಿ: ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದಿದ್ದ ಆಯುರ್ವೇದ ವೈದ್ಯ ಡಾ. ರಮೇಶ್ ಕಲಗೂಟ್ಕರ್ ಅವರ ಭೀಕರ ಕೊಲೆ ಪ್ರಕರಣವನ್ನು ಶಿರಸಿ ಪೊಲೀಸರು ಅತ್ಯಂತ ವೇಗವಾಗಿ ಭೇದಿಸಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಈ ಕುರಿತು ಶಿರಸಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಮಾಹಿತಿ ನೀಡಿದ್ದು, “ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಯು ಹಣ ಮತ್ತು ಚಿನ್ನಾಭರಣದ ಆಸೆಗಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ದಿನವೇ ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ,” ಎಂದು ತಿಳಿಸಿದ್ದಾರೆ.

ವೈದ್ಯರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿಯಲಾಗಿದ್ದು, ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಸುಳಿವುಗಳ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಈ ಪ್ರಕರಣದ ತನಿಖೆಯಲ್ಲಿ ಶಿರಸಿ ಡಿವೈಎಸ್‌ಪಿ ಗೀತಾ ಪಾಟಿಲ್ ನೇತೃತ್ವದ ತಂಡ ತೋರಿದ ಸಮಯಪ್ರಜ್ಞೆ ಮತ್ತು ಚಾಣಕ್ಷತನವನ್ನು ಎಸ್‌ಪಿ ದೀಪನ್ ಮುಕ್ತಕಂಠದಿಂದ ಶ್ಲಾಘಿಸಿ, ವೈದ್ಯರ ಕೊಲೆಯಂತಹ ಸೂಕ್ಷ್ಮ ಪ್ರಕರಣವನ್ನು ಅತಿ ವೇಗವಾಗಿ ಪತ್ತೆಹಚ್ಚಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಬಂಧಿತನಿಂದ ಕೊಲೆಗೆ ಬಳಸಿದ ವಸ್ತುಗಳು ಅಥವಾ ಕಳವು ಮಾಡಲಾದ ಸೊತ್ತುಗಳ ಬಗ್ಗೆ ತೀವ್ರ ವಿಚಾರಣೆ ಮುಂದುವರೆದಿದ್ದು, ಹಗಲು ಹೊತ್ತಿನಲ್ಲೇ ನಡೆದಿದ್ದ ಈ ಘಟನೆಯಿಂದ ಆತಂಕಗೊಂಡಿದ್ದ ಕಾಲೋನಿ ನಿವಾಸಿಗಳಿಗೆ ಪೊಲೀಸರ ಕ್ಷಿಪ್ರ ಕ್ರಮ ಸಮಾಧಾನ ತಂದಿದೆ.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ಶ್ರೀಮತಿ ಗೀತಾ ಪಾಟಿಲ್ ಹಾಗೂ ಗ್ರಾಮೀಣ ಠಾಣೆಯ ಸಿಪಿಐ ಹೂಗಾರ್ ಉಪಸ್ಥಿತರಿದ್ದರು. ಸದ್ಯ ವೈದ್ಯರ ಹತ್ಯೆಯ ಹಿಂದೆ ಬೇರೆ ಯಾವುದಾದರೂ ಕಾಣದ ಕೈಗಳಿವೆಯೇ ಅಥವಾ ಕೇವಲ ದರೋಡೆ ಉದ್ದೇಶವೇ ಎಂಬುದರ ಕುರಿತು ತನಿಖೆ ಮುಂದುವರೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share