ಶಿರಸಿ: ಮಳೆಗಾಲ ಆರಂಭವಾಗುವ ಮುನ್ನ ಚರಂಡಿ ಸ್ವಚ್ಛತೆ ಹಾಗೂ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ, ಶಿರಸಿ ನಗರಸಭೆಯ ನಿರ್ಲಕ್ಷ್ಯದಿಂದ ನಗರದೆಲ್ಲೆಡೆ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಸುರಿದ ಭಾರೀ ಮಳೆಗೆ ರಸ್ತೆ, ಬಡಾವಣೆಗಳು ಮತ್ತು ತಗ್ಗು ಪ್ರದೇಶಗಳು ನೀರಿನಿಂದ ತುಂಬಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಗಾಲದ ಪೂರ್ವ ಸಿದ್ಧತೆಗಳ ಭಾಗವಾಗಿ ಗಟಾರಗಳನ್ನು ಸ್ವಚ್ಛಗೊಳಿಸಿ, ಮಳೆನೀರು ಸುಗಮವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ಆದರೆ ಶಿರಸಿ ನಗರಸಭೆ ಈ ಬಗ್ಗೆ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆಯಿಂದ ಸುರಿದ ಭಾರೀ ಮಳೆಯಿಂದ ನಗರದ ಅನೇಕ ಪ್ರದೇಶಗಳು ಜಲಾವೃತಗೊಂಡವು. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಹಲವೆಡೆ ಕಾರು ಹಾಗೂ ದ್ವಿಚಕ್ರ ವಾಹನಗಳು ನೀರಿನ ನಡುವೆ ಸಂಚರಿಸಲು ಹರಸಾಹಸ ಪಡುವಂತಾಯಿತು.
ಸಮೃದ್ಧಿ ನಗರದ ಚಂದ್ರ ಕಾಲೋನಿ, ದುಂಡಶಿ ನಗರ, ಮಂಜುನಾಥ ನಗರ ಹಾಗೂ ಬನವಾಸಿ ರಸ್ತೆಯ ಹಲವು ಭಾಗಗಳು ನೀರಿನಲ್ಲಿ ಮುಳುಗಿದವು. ಸಮೃದ್ಧಿ ನಗರದ ಚಂದ್ರ ಕಾಲೋನಿಯ ಕೆಲವು ಮನೆಗಳಿಗೆ ಮಳೆನೀರು ನುಗ್ಗಿ ನಿವಾಸಿಗಳು ಸಂಕಷ್ಟ ಅನುಭವಿಸಿದರು. ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯಿಂದ ನೀರು ಹೊರಹೋಗದೆ ಮನೆಗಳ ಸುತ್ತಮುತ್ತಲೇ ನಿಂತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜುನಾಥ ನಗರದ ಮೂರನೇ ಅಡ್ಡರಸ್ತೆಯಲ್ಲಿಯೂ ಮಳೆನೀರು ತುಂಬಿಕೊಂಡಿದ್ದು, ನಿವಾಸಿಗಳ ಓಡಾಟಕ್ಕೆ ತೊಂದರೆಯಾಗಿದೆ. ಬನವಾಸಿ ರಸ್ತೆಯ ಗೊಲಗೇರಿ ಓಣಿ ಕ್ರಾಸ್ ಪ್ರದೇಶದಲ್ಲಿ ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮ ಮಳೆನೀರು ಹರಿಯದೆ ರಸ್ತೆಯಲ್ಲೇ ಸಂಗ್ರಹವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆ ಇನ್ನೂ ಮುಂದುವರಿದರೆ ಗಟಾರದ ನೀರು ಮನೆಗಳಿಗೆ ನುಗ್ಗುವ ಸಾಧ್ಯತೆಯಿದ್ದು, ನಗರಸಭೆ ತುರ್ತು ಕ್ರಮ ಕೈಗೊಂಡು ಚರಂಡಿ ಸ್ವಚ್ಛತೆ ಹಾಗೂ ನೀರು ಹರಿವಿನ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.