Saturday, May 30, 2026
HomeLocal Newsಹೈಬೀಮ್‌ ತಗ್ಗಿಸಿ; ಕಣ್ಣಷ್ಟೇ ಅಲ್ಲ, ಬದುಕೇ ಕುರುಡಾದೀತು!

ಹೈಬೀಮ್‌ ತಗ್ಗಿಸಿ; ಕಣ್ಣಷ್ಟೇ ಅಲ್ಲ, ಬದುಕೇ ಕುರುಡಾದೀತು!

ಶಿರಸಿ: ಶಿರಸಿ ನಗರದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ದಿನದಿಂದ ದಿನಕ್ಕೆ ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಶಿರಸಿಯ ಡಾ. ರವಿಕಿರಣ ಪಟವರ್ಧನ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ವಿಶೇಷವಾಗಿ ಹೈ-ಬೀಮ್ ಲೈಟ್‌ಗಳ ಅತಿಯಾದ ದುರ್ಬಳಕೆ ಹಾಗೂ ನಿಯಮಬಾಹಿರ LED, HID, Xenon ಲೈಟ್‌ಗಳ ಅಳವಡಿಕೆ, ಸಾರ್ವಜನಿಕರ ಸುರಕ್ಷತೆಗೆ ನೇರ ಬೆದರಿಕೆಯಾಗುತ್ತಿದೆ.

ಎದುರಿಗೆ ವಾಹನ ಬರುತ್ತಿದ್ದರೂ ಹೈ-ಬೀಮ್ ಆಫ್ ಮಾಡದ ಚಾಲಕರು, ಕ್ಷಣಾರ್ಧದಲ್ಲಿ ಎದುರಿನ ಚಾಲಕರ ದೃಷ್ಟಿ ಕುಂದಿಸುವ ಮೂಲಕ ಅಪಘಾತದ ಅಪಾಯವನ್ನು ಹೆಚ್ಚಿಸುತ್ತಿದ್ದಾರೆ.

ಇದರ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರು, ಹಿರಿಯ ನಾಗರಿಕರು ಸೇರಿದಂತೆ ಅನೇಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೆಲ ಸಂದರ್ಭಗಳಲ್ಲಿ ಕ್ಷಣಿಕವಾಗಿ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿ ಜೀವಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚುತ್ತಿದೆ.

ಮಾನದಂಡಗಳಿಗೆ ವಿರುದ್ಧವಾಗಿ ಅಳವಡಿಸಲಾದ ಅತೀ ತೀವ್ರ ಬೆಳಕಿನ ಲೈಟ್‌ಗಳು “ಬ್ಲೈಂಡಿಂಗ್ ಎಫೆಕ್ಟ್” ಉಂಟುಮಾಡುತ್ತಿದ್ದು, ರಸ್ತೆ ಸುರಕ್ಷತೆಯನ್ನು ಹದಗೆಡಿಸುತ್ತಿವೆ.

ಪ್ರಸ್ತುತ ಕಾನೂನು ಪ್ರಕಾರ ಎದುರಿಗೆ ವಾಹನ ಬಂದಾಗ ಲೋ-ಬೀಮ್ ಬಳಕೆ ಕಡ್ಡಾಯವಾಗಿದ್ದು, ಹೈ-ಬೀಮ್ ದುರ್ಬಳಕೆ ಹಾಗೂ ಅನಧಿಕೃತ ಲೈಟ್ ಮಾರ್ಪಾಡು ಅಪರಾಧಗಳಾಗಿವೆ.

ಇಂತಹ ಉಲ್ಲಂಘನೆಗಳಿಗೆ ದಂಡ ಹಾಗೂ ಕಾನೂನು ಕ್ರಮಗಳಿದ್ದರೂ, ಶಿರಸಿ ನಗರದಲ್ಲಿ ಈ ನಿಯಮಗಳ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂಬುದು ಗಮನಾರ್ಹ ಸಂಗತಿ.

ಹೆಲ್ಮೆಟ್ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿರುವಾಗ, ಹೈ-ಬೀಮ್ ದುರ್ಬಳಕೆಯಂತಹ ಜೀವಾಪಾಯಕರ ಸಮಸ್ಯೆಗಳ ಮೇಲೆ ಸಮರ್ಪಕ ಗಮನ ಹರಿಸಲಾಗುತ್ತಿಲ್ಲ.

ಆದ್ದರಿಂದ ಶಿರಸಿ ಟ್ರಾಫಿಕ್ ಪೊಲೀಸ್ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ತುರ್ತಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ರಾತ್ರಿ ವಿಶೇಷ ಪರಿಶೀಲನಾ ದಳಗಳನ್ನು ನಿಯೋಜಿಸುವುದು, ಹೈ-ಬೀಮ್ ದುರ್ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ಅಕ್ರಮ ಲೈಟ್‌ಗಳನ್ನು ವಶಪಡಿಸಿಕೊಳ್ಳುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನಗಳನ್ನು ಆರಂಭಿಸುವುದು ಅಗತ್ಯವಾಗಿದೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕರೂ ತಮ್ಮ ಹೊಣೆಗಾರಿಕೆಯನ್ನು ಅರಿತು, ನಗರ ಪ್ರದೇಶಗಳಲ್ಲಿ ಲೋ-ಬೀಮ್ ಬಳಕೆ, ಎದುರಿಗೆ ವಾಹನ ಬಂದಾಗ ತಕ್ಷಣ ಡಿಪ್ಪರ್ ಬಳಸುವುದು, ಅನಧಿಕೃತ ಲೈಟ್‌ಗಳನ್ನು ಅಳವಡಿಸದಿರುವುದು ಹಾಗೂ ಇತರರ ಜೀವದ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share