ಶಿರಸಿ: ಮನೆಯ ಬಾತ್ರೂಂ ಮೇಲಿನ ಹಂಚು ತೆಗೆದು ಒಳನುಗ್ಗಿ ನಗದು ಮತ್ತು ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ, ಪ್ರಸ್ತುತ ಮುರ್ಡೇಶ್ವರದಲ್ಲಿ ವಾಸವಾಗಿದ್ದ ಹನುಮಂತ ತೋಲಪ್ಪ ಕೋಂಚಿಕೊರವರ್ ಬಂಧಿತ ಆರೋಪಿ.
2026ರ ಜನವರಿ 22ರ ರಾತ್ರಿ 8.30ರಿಂದ ಜನವರಿ 26ರ ಸಂಜೆ 6.30ರ ನಡುವಿನ ಅವಧಿಯಲ್ಲಿ ಕಳ್ಳರು ಮನೆಯ ಬಾತ್ರೂಂ ಮೇಲಿನ ಹಂಚು ತೆಗೆದು ಒಳನುಗ್ಗಿದ್ದರು. ಬಳಿಕ ಟ್ರೆಜರಿಯ ಬಾಗಿಲು ತೆರೆದು, ಒಳಗಿದ್ದ ಲಾಕರ್ ಅನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು ಅದರಲ್ಲಿದ್ದ 1.20 ಲಕ್ಷ ರೂ. ನಗದು ಮತ್ತು 10 ಗ್ರಾಂ ತೂಕದ, 60 ಸಾವಿರ ರೂ. ಮೌಲ್ಯದ ಬಂಗಾರದ ಸರ ಕಳವು ಮಾಡಿದ್ದರು. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು. ಸ್ಥಳೀಯ ಖಚಿತ ಮಾಹಿತಿಯ ಆಧಾರದ ಮೇಲೆ ಹನುಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಳಿಕ ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿ ಗದಗ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹೊಸನಗರ ಮತ್ತು ಸಾಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದರೋಡೆ, ಡಕಾಯಿತಿ, ಮನೆ ಕಳ್ಳತನ, ಕುರಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಮತ್ತು ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಶಿರಸಿ ವೃತ್ತ ನಿರೀಕ್ಷಕ ಸಂಪತ್ ಸಿ. ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಯಿತು.
ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐಗಳಾದ ಬಸವರಾಜ ಕನಶೆಟ್ಟಿ ಮತ್ತು ಗೀತಾ ಕಲಘಟಗಿ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಕೋಟೇಶ್ವರ ನಾಗರವಳ್ಳಿ, ಮಂಜುನಾಥ ರೆಡ್ಡಿ, ಸಂದೀಪ ನಿಂಬಾಯಿ, ರಾಕೇಶ ಎನ್.ಎಚ್., ಅಶೋಕ ಹರಿಕಂತ್ರ ಹಾಗೂ ಮುರ್ಡೇಶ್ವರ ಠಾಣೆಯ ಮಂಜುನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿದ್ದಾರೆ.


